ದೇಶಕ್ಕೆ ಬೇಕಿರುವುದು ಯೋಧರೇ ಹೊರತು ಗುತ್ತಿಗೆ ಕಾರ್ಮಿಕರಲ್ಲ.

ಸೇನೆಯ ನಿವೃತ್ತ ಅಧಿಕಾರಿ, ಮೇಜರ್ ಜನರಲ್ (ನಿವೃತ್ತ) ಅವರ ಲೇಖನವನ್ನು ಎರವಲು ಪಡೆಯಲಾಗಿದೆ
‘ಅಗ್ನಿಪಥ’ವು ಲೋಪಗಳಿಂದಲೇ ಕೂಡಿರುವ ವ್ಯವಸ್ಥೆ. ಇದರ ಅನುಷ್ಠಾನದಿಂದ ಬೃಹತ್ತಾದ, ಮಾರ್ಪಡಿಸಲಾಗದ, ಖಚಿತ ಅನಾನುಕೂಲಗಳು ಉಂಟಾಗಲಿವೆ. ಯುದ್ಧಕ್ಕೆ ಸಂಬಂಧಿಸಿದ ಕಾರ್ಯಾಚರಣಾ ದಕ್ಷತೆಯು ಚಿಂತೆಗೆ ಕಾರಣವಾಗುವ ಮಟ್ಟಿಗೆ ಇಳಿಕೆಯಾಗುತ್ತದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಭಾರಿ ರಾಜಿ ಮಾಡಿಕೊಂಡಂತಾಗುತ್ತದೆ. ಯೋಜನೆಯನ್ನು ಕೈಬಿಡಬೇಕು. ಹಣ ಉಳಿತಾಯವಾಗುತ್ತದೆ ಎಂಬ ಕಾರಣಕ್ಕೆ ದೇಶದ ಭದ್ರತೆಯನ್ನು ಕಡೆಗಣಿಸಬಹುದೇ?
ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷದ ಅಲ್ಪಾವಧಿ ಕರ್ತವ್ಯದ ‘ಅಗ್ನಿಪಥ’ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಪ‍್ರಕಟಿಸಿದೆ. ನೇಮಕಗೊಂಡವರಲ್ಲಿ ಶೇ 25ರಷ್ಟು ಸಿಬ್ಬಂದಿಗೆ ಮಾತ್ರ ನಾಲ್ಕು ವರ್ಷದ ಬಳಿಕ ಸೇನೆಯಲ್ಲಿ ಮುಂದುವರಿಯುವ ಅವಕಾಶ ದೊರಕಲಿದೆ. ಸೇನೆಯನ್ನು ತಾರುಣ್ಯಯುತವಾಗಿ ಇರಿಸುವುದು, ಸರ್ಕಾರದ ಮೇಲೆ ಇರುವ ಪಿಂಚಣಿ ಹೊರೆಯನ್ನು ತಗ್ಗಿಸುವುದು ಈ ಯೋಜನೆಯ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ.
‘ಅಗ್ನಿಪಥ’ವು ಲೋಪಗಳೇ ಇರುವ ವ್ಯವಸ್ಥೆ. ಇದರ ಅನುಷ್ಠಾನದಿಂದ ಬೃಹತ್ತಾದ, ಮಾರ್ಪಡಿಸಲಾಗದ, ಖಚಿತ ಅನಾನುಕೂಲಗಳು ಉಂಟಾಗಲಿವೆ. ಯುದ್ಧಕ್ಕೆ ಸಂಬಂಧಿಸಿದ ಕಾರ್ಯಾಚರಣಾ ದಕ್ಷತೆಯು ಚಿಂತೆಗೆ ಕಾರಣವಾಗುವ ಮಟ್ಟಿಗೆ ಇಳಿಕೆಯಾಗುತ್ತದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಭಾರಿ ರಾಜಿ ಮಾಡಿಕೊಂಡಂತಾಗುತ್ತದೆ. ಯೋಜನೆಯನ್ನು ಕೈಬಿಡಬೇಕು. ಹಣ ಉಳಿತಾಯವಾಗುತ್ತದೆ ಎಂಬ ಕಾರಣಕ್ಕೆ ದೇಶದ ಭದ್ರತೆಯನ್ನು ಕಡೆಗಣಿಸಬಹುದೇ?
ಭಾರತದ ಆಡಳಿತ ವ್ಯವಸ್ಥೆ ಜಾತ್ಯತೀತ ಪ್ರಜಾತಂತ್ರ. ಭಾರತದ ಸೇನೆಯು ಜಾತ್ಯತೀತತೆ ಮತ್ತು ಪ್ರಜಾಸತ್ತೆ ಎರಡರ ಅತ್ಯುತ್ಕೃಷ್ಟ ಮಾದರಿ. ರಾಜಕೀಯೇತರವಾಗಿಯೇ ಇರುವುದು ನಮ್ಮ ಸೇನೆಯ ಅತ್ಯಂತ ದೊಡ್ಡ ಶಕ್ತಿ. ರಾಜಕೀಯ ಪಕ್ಷಗಳು ತಮ್ಮ ಮೌಲ್ಯ ವೃದ್ಧಿಸಿಕೊಳ್ಳುವುದಕ್ಕಾಗಿ ಸೇನೆಯನ್ನು ಬಳಸಿಕೊಳ್ಳದಂತೆ ಎಚ್ಚರ ವಹಿಸಬೇಕಾದ ಅಗತ್ಯ ಇದೆ.
ಹಾಗೆಯೇ, ರಾಜಕೀಯ ಗುರಿಗಳನ್ನು ಈಡೇರಿಸಿಕೊಳ್ಳಲು ಸೇನೆಯಲ್ಲಿ ಅನಗತ್ಯವಾದ ಮತ್ತು ಅಸಂಗತವಾದ ಬದಲಾವಣೆ ಮಾಡುವುದು ಕೂಡ ಸರಿಯಲ್ಲ. ದಶಕಗಳಿಂದ ಪೋಷಿಸಿಕೊಂಡು ಬಂದ ಸೇನೆಯ ಸ್ವರೂಪಕ್ಕೆ ಇಂತಹ ಬದಲಾವಣೆಗಳು ಧಕ್ಕೆ ತರುತ್ತವೆ, ರಕ್ಷಣಾ ಪಡೆಗಳ ಬಲವನ್ನು ಕುಂದಿಸುತ್ತವೆ. ಸೇನೆಯು ರಾಜಕೀಯದಿಂದ ಸದಾ ದೂರವೇ ಇದ್ದದ್ದು ಮತ್ತು ಜಾತ್ಯತೀತವಾಗಿ ಇದ್ದದ್ದರ ಫಲವು ದೇಶಕ್ಕೆ ದಕ್ಕಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಸರ್ಕಾರವು ಈಗ ಪ್ರಕಟಿಸಿರುವ ಗುತ್ತಿಗೆ ನೇಮಕಾತಿ ಪದ್ಧತಿಯನ್ನು ಜಗತ್ತಿನ ದೊಡ್ಡ ದೊಡ್ಡ ಸೇನೆಗಳೆಲ್ಲವೂ ಪರಿಶೀಲನೆಗೆ ಒಳಪಡಿಸಿವೆ ಮತ್ತು ಇಂತಹ ಯೋಜನೆಯು ಸೇನೆಯ ಬಲವನ್ನು ಕುಗ್ಗಿಸುತ್ತದೆ ಎಂಬ ನಿಲುವಿಗೆ ಬಂದಿವೆ. ನಮ್ಮ ನೆರೆಯಲ್ಲಿರುವ ಎರಡು ಪ್ರತಿಸ್ಪರ್ಧಿ ದೇಶಗಳು ಕೂಡ ಇದೇ ನಿಲುವಿಗೆ ಬಂದಿವೆ ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಲೇಬೇಕು ಮತ್ತು ಇದರಲ್ಲಿಯೇ ನಮಗೆ ಹಲವು ಪಾಠಗಳು ಇರಬಹುದು. ಅಗ್ನಿಪಥ ಯೋಜನೆಯ ಬಗ್ಗೆ ಮೃದುವಾಗಿ ಹೇಳಬಹುದಾದ ಮಾತೆಂದರೆ, ಈ ಯೋಜನೆಯು ವಿವೇಚನಾರಹಿತವಾಗಿ ತೆಗೆದುಕೊಂಡ ನಿರ್ಧಾರದ ಫಲ. ‘ಅಗ್ನಿಪಥ’ವು ರಕ್ಷಣಾ ಪಡೆಗಳ ಸ್ವರೂಪ, ಉತ್ಸಾಹ, ವೃತ್ತಿಪರತೆ ಎಲ್ಲವನ್ನೂ ಕೊಲ್ಲಲಿದೆ.
ರಕ್ಷಣಾ ಪಡೆಗಳ ಯುದ್ಧ ಸನ್ನದ್ಧತೆ ಮತ್ತು ಕಾರ್ಯದಕ್ಷತೆಯನ್ನು ಈ ಯೋಜನೆಯು ಕುಗ್ಗಿಸಲಿದೆ ಎಂಬುದು ಕಳವಳಕಾರಿಯಾದ ಅಂಶ.
ಮೊದಲನೆಯದಾಗಿ, ಆರು ತಿಂಗಳು ತರಬೇತಿಯ ಬಳಿಕ ಯುವ ಜನರು ಸೇನೆಗೆ ಸೇರ್ಪಡೆಯಾಗುತ್ತಾರೆ. ನಾಲ್ಕೇ ವರ್ಷಗಳಲ್ಲಿ ಅಲ್ಲಿಂದ ಹೊರಬೀಳುತ್ತಾರೆ. ಶಕ್ತ ಮತ್ತು ದಿಟ್ಟ ಯೋಧರಾಗಿ ಪರಿವರ್ತನೆಯಾಗುವ ಮುನ್ನವೇ ಅವರು ಸೇನೆಯಿಂದ ಹೊರಗೆ ಬಂದು ಆಗಿರುತ್ತದೆ. ಹೀಗಾಗಿ ಸೇನೆಯು ಹೆಚ್ಚು ತಾರುಣ್ಯದಿಂದ ಕೂಡಿರುತ್ತದೆ ಎಂಬುದು ರಮ್ಯ ಕಲ್ಪನೆಯೇ ಹೊರತು, ಅದರಿಂದ ದೇಶಕ್ಕೆ ಆಗುವ ಪ್ರಯೋಜನ ಪ್ರಶ್ನಾರ್ಹವಾಗಿದೆ.
ರಕ್ಷಣಾ ಪಡೆಗಳ ಸಿಬ್ಬಂದಿಯ ಒಟ್ಟು ಸಂಖ್ಯೆ ಸುಮಾರು 12 ಲಕ್ಷ. ಅವರಲ್ಲಿ ಶೇ 25ರಷ್ಟು ಮಂದಿ ಮಾತ್ರ ಕಾಯಂ ಸಿಬ್ಬಂದಿ ಎಂಬ ಸ್ಥಿತಿ ಒಂದು ಕಾಲದಲ್ಲಿ ಸೃಷ್ಟಿಯಾಗಬಹುದು. ಅಂದರೆ 12 ಲಕ್ಷ ಸಿಬ್ಬಂದಿಯಲ್ಲಿ 3 ಲಕ್ಷ ಮಾತ್ರ ಕಾಯಂ ಆಗಿರುವವರು.
ಸೇನೆಯಲ್ಲಿ ಸಿಬ್ಬಂದಿಯ ಎರಡು ವರ್ಗಗಳು ಇದರಿಂದಾಗಿ ಸೃಷ್ಟಿಯಾಗುತ್ತದೆ. ನಾಲ್ಕು ವರ್ಷ ಇರುವವರು ಮತ್ತು ಕಾಯಂ ಆಗಿರುವವರಿಗೆ ಎರಡು ರೀತಿಯ ತರಬೇತಿ ಮಾದರಿಗಳನ್ನು ರೂಪಿಸಬೇಕಾಗುತ್ತದೆ. ನಾಲ್ಕು ವರ್ಷದ ಅವಧಿಗೆ ನೇಮಕವಾಗುವವರಿಗೆ ಭಿನ್ನ ರೀತಿಯ ತರಬೇತಿ ಮತ್ತು ಕಾಯಂ ಆಗಿರುವವರಿಗೆ ಭಿನ್ನ ತರಬೇತಿ ಬೇಕಾಗುತ್ತದೆ. ನಾಲ್ಕು ವರ್ಷ ಅವಧಿಗೆ ಸೇನೆಯಲ್ಲಿ ಇರುವವರ ಸಂಖ್ಯೆಯೇ ಹೆಚ್ಚಾಗಿ ಇರುತ್ತದೆ. ಇದು ಸೇನೆಯ ಕಾರ್ಯದಕ್ಷತೆ, ಯುದ್ಧ ಚಾತುರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ನಾಲ್ಕು ವರ್ಷದ ಸೇವೆ ಮುಗಿಸಿ, ಶಸ್ತ್ರ ತರಬೇತಿ ಪಡೆದು ಸದೃಢರಾದ ಹೆಚ್ಚು ವಿದ್ಯಾಭ್ಯಾಸವೂ ಇಲ್ಲದೆ ಹೊರಬರುವ ಈ ಜನರು ಏನು ಮಾಡಬೇಕು? ಈ ವರ್ಷ 46 ಸಾವಿರ ಯುವ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಮುಂದಿನ ವರ್ಷಗಳಲ್ಲಿ ಇದನ್ನು ಮೂರು ಪಟ್ಟು ಹೆಚ್ಚಿಸಲಾಗುವುದು ಎಂದೂ ಹೇಳಿದೆ. ಅಂದರೆ, ನಾಲ್ಕು ವರ್ಷಗಳ ಬಳಿಕ, ಸುಮಾರು 31 ಸಾವಿರ ಜನರು ಸೇನೆಯ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ.
ನಂತರದ ಪ್ರತಿ ವರ್ಷ ಇದರ ಮೂರು ಪಟ್ಟು ಜನರು ನಿರುದ್ಯೋಗಿಗಳಾಗುತ್ತಾರೆ. ಈ ಜನರು ಸಮಾಜಕ್ಕೆ ಹೊರೆಯಾಗಿ ಪರಿಣಮಿಸಬಹುದು, ಅವರನ್ನು ನಿಭಾಯಿಸುವುದು ಕಷ್ಟವಾಗಬಹುದು, ಆಡಳಿತ ಪಕ್ಷವು ತನಗೆ ಬೇಕಾದ ರೀತಿಯಲ್ಲಿ ಅವರನ್ನು ಬಳಸಿಕೊಳ್ಳಬಹುದು ಎಂಬ ಆರೋಪಗಳು ಇವೆ. ಈ ಕುರಿತು ವಿಶ್ಲೇಷಣೆ ನಡೆಸುವ ಅಗತ್ಯ ಇದೆ.
ಗುತ್ತಿಗೆ ಆಧಾರದಲ್ಲಿ ಸೈನ್ಯಕ್ಕೆ ಸೇರುವವರ ಬಗ್ಗೆ ಯೋಚಿಸಿದರೂ ಇದು ಉತ್ತಮವಾದ ಯೋಜನೆ ಎಂಬ ಭಾವನೆ ಮೂಡುವುದಿಲ್ಲ. ಈ ಯುವಕರಿಗೆ ವಿಶೇಷ ವ್ಯವಸ್ಥೆಯ ಮೂಲಕ ಪಿಯುಸಿ ಅಥವಾ 12ನೇ ತರಗತಿ ಪೂರ್ಣಗೊಳಿಸುವ ಅವಕಾಶ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ, 12ನೇ ತರಗತಿಯ ಪ್ರಮಾಣಪತ್ರ ಹಿಡಿದುಕೊಂಡರೆ ಉದ್ಯೋಗ ಸಿಗಬಹುದೇ? ಅದಲ್ಲದೇ, ಈ ಉದ್ಯೋಗಗಳಿಗೆ ಸ್ಪರ್ಧೆಯಲ್ಲಿ ಇರುವ ಇತರರಿಗೆ ಇವರಿಗಿಂತ ಕಡಿಮೆ ವಯಸ್ಸು ಇರುತ್ತದೆ. ಖಾಸಗಿ ಸಂಸ್ಥೆಗಳು ಕಡಿಮೆ ವಯಸ್ಸಿನವರನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಶಿಕ್ಷಣವೂ ಪೂರ್ಣಗೊಳ್ಳುವುದಿಲ್ಲ, ಉದ್ಯೋಗವೂ ದೊರೆಯುವುದಿಲ್ಲ ಎಂಬ ಹತಾಶ ಸ್ಥಿತಿಗೆ ಇವರು ತಳ್ಳಲ್ಪಡುತ್ತಾರೆ.
ಸೇನೆಯಲ್ಲಿ ಉಳಿಯುವ ಶೇ 25ರಷ್ಟು ಯುವ ಜನರಿಗೂ ಅನ್ಯಾಯವೇ ಆಗುತ್ತದೆ. ಇವರನ್ನು ಸೇವೆಯಲ್ಲಿ ಮುಂದುವರಿಸಲಾಗುವುದಿಲ್ಲ. ಬದಲಿಗೆ, ಸೇನೆಗೆ ಮರು ನೇಮಕ ಮಾಡಿಕೊಳ್ಳಲಾಗುತ್ತದೆ. ವೇತನ, ಸೇವಾ ಜ್ಯೇಷ್ಠತೆ, ಬಡ್ತಿ, ನಿವೃತ್ತಿ ಸೌಲಭ್ಯಗಳು ಈ ಯಾವುದಕ್ಕೂ ಮೊದಲ ನಾಲ್ಕು ವರ್ಷದ ಸೇವೆಯನ್ನು ಪರಿಗಣಿಸಲಾಗುವುದಿಲ್ಲ. ಇದು ಅನ್ಯಾಯ ಎಂದು ಅನಿಸುತ್ತದೆ.
ಸೇನೆಯು ಹೇಗೆ ಸುಸಂಬದ್ಧವಾಗಿ ಬೆಳೆದು ಬಂದಿದೆ, ಸಿಬ್ಬಂದಿಯು ದೇಶದ ರಕ್ಷಣೆ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ಹೇಗೆ ವೃತ್ತಿಪರ ಯೋಧರಾಗಿ ಪರಿವರ್ತನೆಗೊಂಡಿದ್ದಾರೆ ಎಂಬುದನ್ನೆಲ್ಲ ತಿಳಿದಿಲ್ಲದ, ರಕ್ಷಣಾ ಪಡೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಇರುವವರೇ ಈ ಯೋಜನೆಯನ್ನು ರೂಪಿಸಿರಬೇಕು. ದೇಶಕ್ಕೆ ಬೇಕಿರುವುದು ಯೋಧರೇ ಹೊರತು ಗುತ್ತಿಗೆ ಕಾರ್ಮಿಕರಲ್ಲ. ಪಿಂಚಣಿ ಮತ್ತು ಸಂಬಳದ ಹೊರೆ ಹೆಚ್ಚುತ್ತದೆ ಎಂಬ ಕಾರಣಕ್ಕೆ ದೇಶದ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡುವುದು ಪ್ರಶ್ನಾರ್ಹ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ