ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅವಾಂತರ: ಉಕ್ಕಿ ಹರಿಯುತ್ತಿರೋ ನದಿಗಳು; ಮನೆಗೆ ನುಗ್ಗಿದ ನೀರು

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅವಾಂತರ: ಉಕ್ಕಿ ಹರಿಯುತ್ತಿರೋ ನದಿಗಳು;  ಮನೆಗೆ ನುಗ್ಗಿದ ನೀರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ(ಜು.31) ಮಧ್ಯಾಹ್ನದವರೆಗೆ ಸ್ಪಲ್ಪ ಮಳೆ ಇಳಿಮುಖವಾಗಿದ್ದರೂ ಮಧ್ಯಾಹ್ನದ ಬಳಿಕ ಮತ್ತೆ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆ ಅವಾಂತರ ಸೃಷ್ಟಿಸಿದೆ. ಇಂದು ಕೂಡ(ಆ.1) ಮಳೆ ಬಿರುಸು ಪಡೆದಿದೆ. ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪೆ ಶಿರ್ಲ ತಂಗೆತ್ತಿ ಪಾಲು ಪಯ್ಯೇ ಸಂಪರ್ಕ ರಸ್ತೆಗೆ ಹೊಳೆಯ ನೀರು ನುಗ್ಗಿ ಸಂಪರ್ಕಕ್ಕೆ ಅನಾನುಕೂಲವಾಗಿದೆ.

      ಸಬರಬೈಲು ಆರ್ಕಜೆ ಬಳಿ ಕುಸುಮಾವತಿಯವರ ಮನೆಗೆ ಗುಡ್ಡ ಕುಸಿತವಾಗಿದೆ. ಗುರುವಾಯನಕೆರೆ ಬಂಟರಭವನ ಬಳಿ ಕೃತಕ ನೆರೆ ಸೃಷ್ಟಿಯಾಗಿದೆ. ನಾಲ್ಕೂರು ಗ್ರಾಮದ ದೊಂಡೋಲಿ ಫಲ್ಗುಣಿ ನದಿ ಸೇತುವೆ ಬಳಿಯ ವಿಠಲ ರವರ ಕುಟುಂಬವನ್ನು ಹತ್ತಿರದ ಮನೆಗೆ ಸ್ಥಳಾಂತರಿಸಲಾಗಿದೆ. ಫಲ್ಗುಣಿ ನದಿ ಪಕ್ಕ ಮನೆ ಇದ್ದು ಅಪಾಯ ಇದ್ದು, ಇಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕುಪ್ಪೆಟ್ಟಿಯಲ್ಲಿ ನದಿ ನೀರು ರಸ್ತೆ ಗೆ ಬರುವ ಸಾಧ್ಯತೆ ಇದೆ.

ಸವಣಾಲು ಗುಡ್ಡ ಕುಸಿತದಿಂದ ಹಲವು ಮನೆಗಳು ಇಲ್ಲಿ ಅಪಾಯದಲ್ಲಿ ಹಲವಾರು ಕುಟುಂಬಗಳಿವೆ. ಗುರುವಾಯನಕೆರೆ ಮಸೀದಿ ಬಳಿ ಭೂ ಕುಸಿತ ಉಂಟಾಗಿದ್ದು, ಮಸೀದಿ ಕಟ್ಟಡಕ್ಕೂ ಅಪಾಯ ಸಾಧ್ಯತೆ ಕಂಡು ಬಂದಿದೆ. ಇದು ಈ ವರ್ಷ ಸಂಪೂರ್ಣ ನವೀಕರಣಗೊಂಡು ಉದ್ಘಾಟನೆ ಯಾಗಿದ್ದ ಮಸೀದಿಯಾಗಿದೆ.

       ಉಪ್ಪಿನಂಗಡಿ ಭಾಗದಲ್ಲಿ ನದಿ ನೀರಿನ ಪ್ರಮಾಣ ಹೆಚ್ಚಳ : ಉಪ್ಪಿನಂಗಡಿಯ ಮಾಣಿ ರಸ್ತೆಯ ನಡುವೆ ಇರುವ ಗಡಿಯಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವಲ್ಲಿ ಗೋಡೆ ಕುಸಿತವಾಗಿದೆ. ಉಪ್ಪಿನಂಗಡಿ ಭಾಗದಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಮಂಜಾಗೃತ ಕ್ರಮವಾಗಿ ಗೃಹರಕ್ಷಕರನ್ನ ನಿಯೋಜಿಸಲಾಗಿದೆ. ನದಿಯ ಭಾಗದಲ್ಲಿರುವ ಮನೆಗಳಿಗೆ ಸ್ಥಳೀಯ ಪಂಚಾಯತ್ ಮೂಲಕ ತಿಳಿಸಲಾಗುತ್ತಿದೆ. ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರೋದಿತ್ತಾಯಕಟ್ಟೆ ಮಸೀದಿ ಬಳಿ ಮೂರು ಮನೆಗಳಿಗೆ ನೀರು ನುಗ್ಗಿದೆ. ಕುಟುಂಬ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.

      ಕೊಣಾಜೆ ಸಮೀಪದ ಗ್ರಾಮಗಳಲ್ಲಿ ಮಳೆ ಅವಾಂತರ : ಕೊಣಾಜೆ ಸಮೀಪದ ಕರಿಯಂಗಳ ಗ್ರಾಮ ಮತ್ತು ಅಮ್ಮುಂಜೆ ಗ್ರಾಮದ ಗಡಿ ಭಾಗದ ಹೊಳೆ ಬದಿ ಪ್ರದೇಶದಲ್ಲಿ ರಾತ್ರಿ ಧಾರಾಕಾರ ಮಳೆ ಬಂದ ಕಾರಣ ನೀರಿನ ಮಟ್ಟ ಏರಿಕೆಯಾಗಿದ್ದು, ಅಲ್ಲಿನ ಹತ್ತಿರದ ಮನೆ ಅಂಗಳಕ್ಕೆ ನೀರು ನುಗ್ಗಿದೆ. ಇದೀಗ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತ್ ಇಲ್ಲಿನ ಸಂತ್ರಸ್ತರನ್ನು ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳಾಂತರ ಮಾಡಲು ಸಹಕಾರ ನೀಡಿದ್ದಾರೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ, ಸ್ಥಳೀಯ ಮುಖಂಡರ ನೆರವಿನಿಂದ ಅವರನ್ನು ಸ್ಥಳಾಂತರ ಮಾಡಲಾಯಿತು. ಇಂದು ಮುಂಜಾನೆ ವೇಳೆಗೆ ಮನೆಯೊಳಗೆ ನೀರು ನುಗ್ಗಿದ್ದು ಇಲ್ಲಿನ ಜನ ಕಂಗಾಲಾಗಿದ್ದಾರೆ.

      ಉಕ್ಕಿ ಹರಿಯುತ್ತಿರೋ ನದಿಗಳು : ನಂದಿನಿ, ಶಾಂಭವಿ ನದಿಗಳು ತುಂಬಿ ಹರಿಯುತ್ತಿದೆ, ಶಾಂಭವಿ‌ ನದಿ ತಟದಲ್ಲಿರುವ ಪಟ್ಟೆ ಕ್ರಾಸ್ ರಸ್ತೆ‌ ಮುಳುಗಡೆಯಾಗಿದೆ, ಹಲವಾರು ಅಂಗಡಿಗಳ ಒಳಭಾಗಕ್ಕೆ ನೀರು ತುಂಬಿ ನಷ್ಟ ಉಂಟಾಗಿದೆ, ನಂದಿನಿ ನದಿ ಉಕ್ಕಿ ಹರಿದ ಪರಿಣಾಮ ಮಿತ್ತಬೈಲ್, ನಡುಗೋಡು, ಕಿಲೆಂಜೂರು, ಪಂಜ ಮತ್ತಿತರ ಕಡೆಗಳಲ್ಲಿ ಕೃಷಿ ಭೂಮಿ ‌ಮುಳುಗಡೆಯಾಗಿದೆ, ಅಪಾಯದಲ್ಲಿರುವ ಮನೆಯವರನ್ನು ಸ್ಥಳಾಂತರಿಸಲಾಗಿದೆ.

      ಮೂಡುಬಿದಿರೆಯಲ್ಲೂ ಮಳೆ : ಮೂಡುಬಿದಿರೆ ತಾಲೂಕಿನ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನೀರು ರಸ್ತೆಗಳಲ್ಲಿ ತುಂಬಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೋಟೆಬಾಗಿಲು ಮಾರಿಗುಡಿಯ ದ್ವಾರದ ಬಳಿ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಮನೆಗಳಿಗೂ ನೀರು ನುಗ್ಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ