ಜಗತ್ತಿನ ಕಾಲ್ಚೆಂಡು ಮಾಂತ್ರಿಕ: ಗೋಲ್ಡನ್‌ ಬಾಲ್‌ ಮೆಸ್ಸಿ

ಜಗತ್ತಿನ ಕಾಲ್ಚೆಂಡು ಮಾಂತ್ರಿಕ: ಗೋಲ್ಡನ್‌ ಬಾಲ್‌ ಮೆಸ್ಸಿ

      ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸಿದ್ದ 2022 ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಗಳು ಮುಗಿದು, ಬಲಿಷ್ಠ ಅರ್ಜೆಂಟೀನಾ ತಂಡ ಅರ್ಹವಾಗಿಯೇ ವಿಶ್ವಕಪ್‌ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಫುಟ್‌ಬಾಲ್‌ ಪ್ರೇಮಿಗಳು ಆಟದ ಪೌರುಷ, ಲಯ, ಮೋಡಿಗಳೆಲ್ಲವನ್ನೂ ಮನದೊಳಗೆ ಇಳಿಸಿಕೊಂಡಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್‌ ನಡುವಣ ಫೈನಲ್ ಪಂದ್ಯದ ರೋಚಕತೆಗೆ ಸಾಟಿಯೇ ಇಲ್ಲವೇನೋ ಎಂಬಂತೆ ಪಂದ್ಯಗಳು ಮುಗಿದು ಹೋಗಿವೆ. ನಿಗದಿತ ಸಮಯದಲ್ಲೂ, ಹೆಚ್ಚುವರಿ ಸಮಯದಲ್ಲೂ ಸಮಬಲದ ಕಾದಾಟ ನಡೆಸಿದ ಅರ್ಜಂಟೀನಾ ಮತ್ತು ಫ್ರಾನ್ಸ್‌ ಆಟಗಾರರು ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ಗೆ ತಲುಪಿಸಿದ್ದರು..

      ಮೆಸ್ಸಿ ಎಂಬ ‍ಫುಟ್‌ಬಾಲ್‌ ಮಾಂತ್ರಿಕ ಅತಿಶ್ರೇಷ್ಠ ಆಟಗಾರರ ಸಾಲಲ್ಲಿ ಅಗ್ರಗಣ್ಯನೇ ಎಂಬ ಚರ್ಚೆಗೆ ಪಂದ್ಯವು ಅಂತ್ಯ ಹಾಡಿದೆ. ಇನ್ನು ಆ ಪ್ರಶ್ನೆಯನ್ನು ಯಾರೂ ಕೇಳಲಿಕ್ಕಿಲ್ಲ. ಹಾಗೆಯೇ ಫ್ರಾನ್ಸ್‌ನ ಎಂಬಾಪೆ ಎಂಬ ಆಟಗಾರ ಮಾಡಿದ ಮೋಡಿಯು ಇನ್ನೂ 23ರ ಹರೆಯದ ಅವರು ಫುಟ್‌ಬಾಲ್‌ ಅಂಗಣದಲ್ಲಿ ಏನೇನೆಲ್ಲ ಮಾಡಬಹುದು ಎಂಬ ನಿರೀಕ್ಷೆಯು ಮಡುಗಟ್ಟುವಂತೆ ಮಾಡಿದೆ. ಈ ಇಬ್ಬರ ಆಟ ಮತ್ತು ಬದುಕಿನತ್ತ ಒಂದು ಇಣುಕುನೋಟ ಇಲ್ಲಿದೆ:

      ʼದಿ ನ್ಯೂ ಮರಡೋನಾ’ ಎಂಬೊಂದು ಹಣೆಪಟ್ಟಿ ಚಿಕ್ಕಪ್ರಾಯದಲ್ಲೇ ಲಯೊನೆಲ್ ಮೆಸ್ಸಿಗೆ ಅಂಟಿಕೊಂಡಿತ್ತು. ಅಷ್ಟು ಭಾರದ ನೊಗ ಹೊತ್ತು ಫುಟ್‌ಬಾಲ್‌ನಲ್ಲಿ ಅರ್ಜೆಂಟೀನಾ ತಂಡದಲ್ಲಿ ಏಗುವುದು ಸಲೀಸಲ್ಲ. 1986ರಲ್ಲಿ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಚಾಂಪಿಯನ್ ಎನಿಸಿಕೊಂಡ ಮೇಲೆ ಅರ್ಜೆಂಟೀನಾಗೆ ಅದೇ ರೀತಿಯ ಸುಸಂದರ್ಭ ಬಂದೇ ಇರಲಿಲ್ಲ. 2014ರಲ್ಲಿ ಕೊನೆಯವರೆಗೆ ಬಂದರೂ ಅದೃಷ್ಟ ಒಲಿದಿರಲಿಲ್ಲ. ಸೌದಿ ಅರೇಬಿಯಾ ಎದುರು ಮೊದಲ ಪಂದ್ಯದಲ್ಲೇ 1–2 ಗೋಲುಗಳಿಂದ ಸೋತಮೇಲೂ ಈ ‘ನ್ಯೂ ಮರಡೋನಾ’ ಭಾನುವಾರ ಅರ್ಜೆಂಟೀನಾ ಚಾಂಪಿಯನ್‌ ಆಗುವಂತೆ ಮಾಡಿದ ರೋಚಕತೆ ಕಣ್ಣೆದುರಲ್ಲಿದೆ.

      ಅದು 2007ರ ಏಪ್ರಿಲ್. ಗೆಟಾಫೆ ಎದುರಿನ ‘ಕೋಪಾ ಡೆಲ್ ರೇ’ ಪಂದ್ಯ. ಅರ್ಧದಷ್ಟು ಮೈದಾನದಲ್ಲಿ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಕಾಲ್ಚಳಕ ತೋರುತ್ತಾ ಮೆಸ್ಸಿ ಒಬ್ಬರೇ ಸಾಗಿದ್ದರು. ಆರು ಎದುರಾಳಿ ಆಟಗಾರರನ್ನು ತಪ್ಪಿಸಿ, ಇಕ್ಕಟ್ಟಿನ ಸನ್ನಿವೇಶವೊಂದರ ನಡುವೆಯೇ ಅವರು ಚೆಂಡನ್ನು ಗೋಲು ಸೇರಿಸಿದ್ದರು. 1986ರ ಕ್ವಾರ್ಟರ್‌ಫೈನಲ್‌ನಲ್ಲಿ ಡಿಯಾಗೊ ಮರಡೋನಾ ಕೂಡ ಅಂಥದ್ದೇ ಗೋಲು ಹೊಡೆದು ಖ್ಯಾತರಾದದ್ದು. ಅದನ್ನು ಫುಟ್‌ಬಾಲ್‌ ಪರಿಣತರ ಪರಿಭಾಷೆಯಲ್ಲಿ ‘ಇನ್‌ಫೇಮಸ್ ಗೋಲ್’ ಅಂತಲೂ ಕರೆಯುತ್ತಾರೆ. ಚೆಂಡನ್ನು ಪಾಸ್‌ ಮಾಡದೆ, ಒಬ್ಬನೇ ಆಟಗಾರ ಪರಾಕ್ರಮ ಮೆರೆಯುವುದು ಈ ಸಾಂಘಿಕ ಆಟದಲ್ಲಿ ಒಪ್ಪಿತವಲ್ಲ. ಈ ಸಲದ ಫೈನಲ್‌ನಲ್ಲಿ ಫ್ರಾನ್ಸ್‌ ಎದುರು ಮೆಸ್ಸಿ ಇಂತಹ ಧಾರ್ಷ್ಟ್ಯವನ್ನು ಯಾವ ಹಂತದಲ್ಲೂ ತೋರಲಿಲ್ಲ. ಎದುರಾಳಿ ತಂಡದ ಎಂಬಾಪೆಗಿಂತ ವಯಸ್ಸಿನಲ್ಲಿ ಹನ್ನೊಂದು ವರ್ಷ ಮೆಸ್ಸಿ ದೊಡ್ಡವರು. ಆ ಮಾಗಿದ ಅನುಭವ ಅವರ ಆಟದ ವೈಖರಿಯಲ್ಲಿ ಎದ್ದು ಕಂಡು ಬರುತ್ತಿತ್ತು.

      ಲಯೊನೆಲ್ ಮೆಸ್ಸಿ ಬಾಲ್ಯವೇ ಆಸಕ್ತಿಕರ. ತಂದೆ ಜಾರ್ಜ್ ಹೊರಾಸಿಯೊ ಮೆಸ್ಸಿ ಅರ್ಜೆಂಟೀನಾದ ರೊಸಾರಿಯೊ ನಿವಾಸಿ. ಉಕ್ಕಿನ ಕಾರ್ಖಾನೆಯಲ್ಲಿ ವ್ಯವಸ್ಥಾಪಕರಾಗಿದ್ದರು. ತಾಯಿ ಸೆಲಿಯಾ ಕ್ಯುಸಿಟಿನಿ, ಮ್ಯಾಗ್ನೆಟ್ ಉತ್ಪಾದನಾ ಘಟಕದಲ್ಲಿ ಕ್ಲೀನರ್. ಅಪ್ಪನಿಗೂ ಫುಟ್‌ಬಾಲ್‌ ಪ್ರೀತಿ. ಅದನ್ನೇ ಮಗನಿಗೆ ಗುರುವಾಗಿ ದಾಟಿಸಿದರು. ಮೆಸ್ಸಿ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಲೀಲಾಜಾಲವಾಗಿ ಒದೆಯತೊಡಗಿದಾಗ ಇನ್ನೂ ಐದು ವರ್ಷದ ಹುಡುಗ. ಅಣ್ಣಂದಿರಾದ ರಾಡ್ರಿಗೊ, ಮಾರ್ಷಿಯಸ್ ಅಲ್ಲದೆ ಸೋದರ ಸಂಬಂಧಿಗಳಾದ ಮ್ಯಾಕ್ಸಿಮುಲಾನೊ ಹಾಗೂ ಎಮಾನ್ಯುಲ್ ಜತೆಗೂ ಆಡುತ್ತಿದ್ದರು. ಮ್ಯಾಕ್ಸಿಮುಲಾನೊ, ಎಮಾನ್ಯುಲ್ ಇಬ್ಬರೂ ವೃತ್ತಿಪರ ಫುಟ್‌ಬಾಲ್‌ ಆಟಗಾರರಾದವರೇ.

     ರೊಸಾರಿಯೊದ ‘ನ್ಯೂವೆಲ್ಸ್‌ ಓಲ್ಡ್‌ ಬಾಯ್ಸ್‌’ ಎಂಬ ಕ್ಲಬ್‌ಗೆ ಮೆಸ್ಸಿ ಸೇರಿಕೊಂಡಾಗ ವಯಸ್ಸಿನ್ನೂ ಆರು. 1987ರಲ್ಲಿ ಹುಟ್ಟಿದ ಆಟಗಾರರನ್ನೆಲ್ಲ ಸೇರಿಸಿ, ‘ದಿ ಮಷಿನ್ ಆಫ್ 87’ ಎಂಬ ತಂಡ ರಚಿಸಲಾಗಿತ್ತು. ಆರು ವರ್ಷಗಳ ಅವಧಿಯಲ್ಲಿ ಮೆಸ್ಸಿ 500ಕ್ಕೂ ಹೆಚ್ಚು ಗೋಲುಗಳನ್ನು ಆ ತಂಡದ ಪರವಾಗಿ ಗಳಿಸಿದ್ದು ಶ್ರೇಷ್ಠತೆಯ ಮುನ್ನುಡಿಯಂತಿತ್ತು. ದೈಹಿಕ ಬೆಳವಣಿಗೆಗೆ ಪೂರಕವಾದ ಹಾರ್ಮೋನ್‌ ನಿಗದಿತ ಪ್ರಮಾಣದಲ್ಲಿ ಉತ್ಪಾದನೆಯಾಗದೇ ಇರುವ ಆರೋಗ್ಯ ಸಮಸ್ಯೆ ಹನ್ನೊಂದನೇ ವಯಸ್ಸಿನಲ್ಲೇ ಕಾಡತೊಡಗಿತು. ಇದರ ಚಿಕಿತ್ಸೆ ದುಬಾರಿ. ‘ರಿವರ್‌ ಪ್ಲೇಟ್‌’ ಎಂಬ ಸ್ಥಳೀಯ ಕ್ಲಬ್‌ ಇದರ ಖರ್ಚನ್ನು ಭರಿಸಲು ಸಿದ್ಧವಿರಲಿಲ್ಲ. ಲಯೊನೆಲ್‌ ಮೆಸ್ಸಿಯ ಅಪ್ಪ–ಅಮ್ಮನಿಗೂ ದಿಕ್ಕು ತೋಚದಂತಾಗಿತ್ತು. ಆಗ ಬಾರ್ಸೆಲೋನಾದ ಕೋಚ್‌ ಕಾರ್ಲ್ಸ್‌ ರೆಕ್ಸಾಚ್‌ ಈ ಪ್ರತಿಭಾವಂತನ ಆಟದ ವೈಖರಿ ಕಂಡು, ಚಿಕಿತ್ಸೆಗೆ ಹಣದ ವ್ಯವಸ್ಥೆ ಮಾಡಲು ಮುಂದಾದರು. ಅದು ಆಗದೇಹೋಗಿದ್ದಿದ್ದರೆ, ಈ ಶ್ರೇಷ್ಠ ಆಟಗಾರನನ್ನು ಜಗತ್ತು ನೋಡಲು ಸಾಧ್ಯವೇ ಇರುತ್ತಿರಲಿಲ್ಲ. ಸ್ಪೇನ್‌ಗೆ ಹೋದರೂ ವಿಶ್ವಕಪ್‌ನಲ್ಲಿ ತನ್ನದೇ ಅರ್ಜೆಂಟೀನಾ ಪರವಾಗಿಯೇ ಆಡಲು ನಿರ್ಧರಿಸಿದ್ದು ಈ ಆಟಗಾರನ ಮಣ್ಣಿನ ಪ್ರೀತಿಗೆ ಸಾಕ್ಷಿ.

      2004–05ರಲ್ಲಿ ಬಾರ್ಸೆಲೋನಾ ಪರವಾಗಿ ಲೀಗ್‌ನಲ್ಲಿ ಮೊದಲ ಗೋಲು ಗಳಿಸಿದ ಅತಿ ಚಿಕ್ಕಪ್ರಾಯದವ ಎನಿಸಿಕೊಂಡದ್ದು, ಮರುವರ್ಷವೇ ಲಾ ಲೀಗಾ ಹಾಗೂ ಚಾಂಪಿಯನ್ಸ್‌ ಲೀಗ್‌ನಲ್ಲಿ ಗೆದ್ದ ತಂಡದ ಭಾಗವಾಗಿದ್ದು, 2012ರಲ್ಲಿ 91 ಗೋಲುಗಳನ್ನು ಹೊಡೆದು ಒಂದೇ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಗೋಲು ಹೊಡೆದ ವಿಶ್ವ ದಾಖಲೆ ಬರೆದದ್ದು (ಜರ್ಮನಿಯ ಗಹ್ಡ್ ಮುಲ್ಲರ್‌ 85 ಗೋಲು ಗಳಿಸಿದ ದಾಖಲೆಯನ್ನು 40 ವರ್ಷಗಳಾದ ಮೇಲೆ ಅಳಿಸಿದ್ದು), 2006ರಲ್ಲಿ ಅರ್ಜೆಂಟೀನಾ ಪರವಾಗಿ ವಿಶ್ವಕಪ್‌ನಲ್ಲಿ ಆಡಿದ ಕಿರಿಯ ಆಟಗಾರ ಎನಿಸಿಕೊಂಡಿದ್ದು, 2010ರ ವಿಶ್ವಕಪ್‌ನಲ್ಲಿ ಚೆನ್ನಾಗಿ ಆಡಿ ತಂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸಲು ಕಾರಣರಾದರೂ ಗೋಲು ಗಳಿಸಲು ಪರದಾಡಿದ್ದು ಹಾಗೂ ಅದೇ ವರ್ಷ ವಿಶ್ವಕಪ್‌ ಫೈನಲ್‌ನಲ್ಲಿ ಆಡಲೇಬೇಕು ಎಂದು ಕನಸು ಕಂಡಿದ್ದು, ಒಲಿಂಪಿಕ್‌ ಚಿನ್ನ ತಂದಿತ್ತದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 98 ಗೋಲುಗಳನ್ನು ದಾಖಲಿಸಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದ್ದು... ಇವೆಲ್ಲವೂ ಚಕಚಕನೆ ತೆರೆದುಕೊಳ್ಳುವ ಮೆಸ್ಸಿ ವೃತ್ತಿಬದುಕಿನ ಪುಟಗಳು.

      ಈ ಸಲ ಮೆಸ್ಸಿ ವಿಶ್ವಕಪ್‌ನಲ್ಲಿ ಏಳು ಗೋಲುಗಳ ಸರದಾರ. 2006ರಿಂದ ಇದುವರೆಗಿನ ವಿಶ್ವಕಪ್‌ಗಳಲ್ಲಿ ಗಳಿಸಿರುವ ಒಟ್ಟು ಗೋಲುಗಳು ಹದಿಮೂರು. ಒಂದು ಕೈಯಲ್ಲಿ ಟ್ರೋಫಿ, ಇನ್ನೊಂದು ಕೈಲಿ ಗೋಲ್ಡನ್‌ ಬಾಲ್‌... ಅರ್ಹವಾಗಿಯೇ ಸಂದ ಗೌರವ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ