ಚಳಿಗಾಲದ ಅಧಿವೇಶನ: ಸಂಸತ್ತಿಗೆ ಟ್ರಾಕ್ಟರ್‌ ರ್ಯಾಲಿ ಹಿಂಪಡೆದಿಲ್ಲ-ರೈತ ಮುಕಂಡರು

ಚಳಿಗಾಲದ ಅಧಿವೇಶನ: ಸಂಸತ್ತಿಗೆ ಟ್ರಾಕ್ಟರ್‌ ರ್ಯಾಲಿ  ಹಿಂಪಡೆದಿಲ್ಲ-ರೈತ ಮುಕಂಡರು

ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರೂ ಮುಂಬರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸತ್ ಭವನದತ್ತ ಉದ್ಧೇಶಿಸಿರುವ ನಿತ್ಯ ಟ್ರ್ಯಾಕ್ಟರ್ ಜಾಥಾವನ್ನು ಹಿಂಪಡೆದಿಲ್ಲ ಎಂದು ರೈತ ಮುಖಂಡರು ಶನಿವಾರ ತಿಳಿಸಿದ್ದಾರೆ.

      ಈ ಕುರಿತು ಭಾನುವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ ಚಳಿಗಾಲದ ಅಧಿವೇಶನದ ಸಂದರ್ಭ ನಿತ್ಯವೂ ಸಂಸತ್ ಭವನದವರೆಗೂ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಘೋಷಿಸಿತ್ತು. ಅಲ್ಲದೆ ಈ ಶಾಂತಿಯುತ ಜಾಥಾದಲ್ಲಿ 500 ರೈತರು ಭಾಗವಹಿಸಲಿದ್ದಾರೆ ಎಂದೂ ಅದು ಹೇಳಿದೆ.

      ಚಳಿಗಾಲದ ಅಧಿವೇಶನವು ನವೆಂಬರ್ 29ರಂದು ಆರಂಭವಾಗಲಿದ್ದು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

      ಸಂಸತ್ತಿಗೆ ನಮ್ಮ ಟ್ರ್ಯಾಕ್ಟರ್ ಜಾಥಾ ಇನ್ನೂ ಕೈಬಿಟ್ಟಿಲ್ಲ. ಅಂದೋಲನದ ಭವಿಷ್ಯ ಹಾಗೂ ಎಂಎಸ್‌ಪಿ ಸಮಸ್ಯೆಗಳ ಕುರಿತು ಭಾನುವಾರ ಸಿಂಘು ಗಡಿಯಲ್ಲಿ ಸೇರಲಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.

      ಕಳೆದ ಜನವರಿ 26, ಗಣರಾಜ್ಯೋತ್ಸವ ದಿನದಂದು ರೈತರು ಕೆಂಪು ಕೋಟೆಗೆ ನಡೆಸಿದ ಟ್ರಾಕ್ಟರ್ ಜಾಥಾದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ