ಚುನಾವಣೆಯಿಂದ ಹಿಂದೆ ಸರಿಯಲು ಒಪ್ಪದ ತಂದೆ: 16ರ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ಲಖನೌ: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ಇಲ್ಲಿಗೆ 40 ಕಿ.ಮೀ ದೂರದ ಬಾರಾಬಂಕಿ ಜಿಲ್ಲೆಯ ಜೈಪುರ ವಲಯದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ ಬಾಲಕಿಯು ಶಾಲೆಯಿಂದ ಬರುವಾಗ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ಕೃತ್ಯ ಎಸಗಿದ್ದು, ಬಳಿಕ ಮನೆಯ ಸಮೀಪ ಬಿಟ್ಟು ಹೋಗಿದ್ದಾರೆ. ಶಂಕಿತ ಆರೋಪಿಗಳು ಬಾಲಕಿ ತಂದೆಯ ವಿರುದ್ಧ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದವನ ಬೆಂಬಲಿಗರು ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರ ಕೈಬಿಡಲು ವ್ಯಕ್ತಿ ನಿರಾಕರಿಸಿದ್ದರಿಂದ, ಅವರ 16 ವರ್ಷದ ಮಗಳ ಮೇಲೆ ಇಂತಹ ಪೈಶಾಚಿಕ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರತಿಸ್ಪರ್ಧಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಬಿಡಲು ಒತ್ತಡ ಹೇರುತ್ತಿದ್ದ. ಇದಕ್ಕಾಗಿ ಹಣದ ಆಮಿಷವನ್ನೂ ಒಡ್ಡಲಾಗಿತ್ತು. ನಾನು ಒಪ್ಪಿರಲಿಲ್ಲ. ಅವರ ಬಯಕೆಗೆ ಸೂಕ್ತವಾಗಿ ಸ್ಪಂದಿಸದ ಕಾರಣ ನನ್ನ ಮಗಳ ಮೇಲೆ ಕೃತ್ಯ ಎಸಗಲಾಗಿದೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿರಲಿಲ್ಲ. ಶೀಘ್ರದಲ್ಲಿಯೇ ನಡೆಯುವ ಸಂಭವವಿತ್ತು. ಶಂಕಿತ ನಾಲ್ವರು ಯುವಕರು ತಲೆಮರೆಸಿಕೊಂಡಿದ್ದು ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ