ಚೇತರಿಸಿಕೋಳ್ಳುತ್ತಿರುವ ಕೇಂದ್ರ ಸಚಿವ ಡಿ.ವಿ.

ಬೆಂಗಳೂರು: ಸದಾ ಹಸನ್ಮುಖಿಯಾಗಿ ಓಡಾಡುತ್ತಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ನಿನ್ನೆ ಹಠಾತ್ತನೆ ಕುಸಿದು ಬಿದ್ದರು. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಕುಸಿದು ಬಿದ್ದ ಸಚಿವರನ್ನು ಬೆಂಗಳೂರಿನ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರ ಆರೋಗ್ಯ ಸ್ಥಿರವಾ ಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಚಿತ್ರದುರ್ಗದಲ್ಲಿ ಸಚಿವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಭಾನುವಾರ ಸಂಜೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.
ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಚಿತ್ರದುರ್ಗದಲ್ಲಿರುವ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಚಿವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್‌ನಲ್ಲಿ ಜೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಕರೆ ತರಲಾಯಿತು. ಕುಸಿದುಬಿದ್ದ ಸಚಿವರು ಚಿತ್ರದುರ್ಗದ ಹೋಟೆಲ್ ನವೀನ್ ರೀಜೆನ್ಸಿಗೆ ಮಧ್ಯಾಹ್ನ 1.45 ಕ್ಕೆ ಊಟಕ್ಕೆ ತೆರಳಿದ್ದರು. ಕಾರಿನಿಂದ ಕೆಳಗಿಳಿದ ಸಚಿವರನ್ನು ಸ್ಥಳೀಯ ಬಿಜೆಪಿ ನಾಯಕರು ಸ್ವಾಗತಿಸಿದ್ದರು . ಹೂವಿನಹಾರ ಹಾಕಿಸಿಕೊಂಡು ಮುಂದಡಿ ಇಟ್ಟ ಕ್ಷಣಾರ್ಧದಲ್ಲಿ ಸಚಿವರು ಕುಸಿದುಬಿದ್ದರು ಎಂದು ಸ್ಥಳದಲ್ಲಿದ್ದ ಬಿಜೆಪಿ ಮುಖಂಡರು ತಿಳಿಸಿದರು.
ಆಸ್ಪತ್ರೆಯಲ್ಲಿ ನಿರ್ಬಂಧ ವಿಧಿಸಿರುವುದರಿಂದ ಆಯ್ದ ವ್ಯಕ್ತಿಗಳಿಗೆ ಮಾತ್ರ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಪೂರ್ಣ ಚೇತರಿಸಿಕೊಂಡ ಕೂಡಲೇ ಇಂದು ಅಥವಾ ನಾಳೆ ಬೆಳಿಗ್ಗೆ ಆಸ್ಪತ್ರೆಯಿಂದ ಕಳುಹಿಸಿ ಕೊಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ