ಗುರುಗಳು ಪಿತೃ ಸಮಾನ:ವಿದ್ಯಾರ್ಥಿಗಳು ಮಕ್ಕಳ ಸಮಾನ

ಗುರುಗಳು ಪಿತೃ ಸಮಾನ:ವಿದ್ಯಾರ್ಥಿಗಳು ಮಕ್ಕಳ ಸಮಾನ

(ಲೇಖಕ ಉಮರ್  ದಾರಿಮಿ ಸಾಲ್ಮರ ಇವರು ಸಮಸ್ತ ವಿದ್ಯಾಭ್ಯಾಸ ಬೋರ್ಡಿನ ಮುಫತ್ತಿಶ್ (ಮದರಸ ಶಿಕ್ಷಣ ನಿರೀಕ್ಷಕ) ಆಗಿದ್ದಾರೆ ಕಳೆದ 18 ವರ್ಷಗಳಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ, ಶಿಕ್ಷಕರ, ರಕ್ಷಕರ ನಾಡಿ ಮಿಡಿತ ಅರಿತವರು. ಸಜಿಪ ರೇಂಜ್ ತನ್ಶೀತ್ ಕಾರ್ಯಕ್ರಮದಲ್ಲಿ ಕೋವಿಡ್ 19 ಮತ್ತು ಮದರಸಾ ಶಿಕ್ಷಣ ಎಂಬ ವಿಷಯ ಮಂಡನೆಯ ಆಯ್ದ ಭಾಗಗಳು)                                 

    ಜಗತ್ತಿಗೆ ಮಾರಕವಾಗಿ ಬಂದ ಕೋವಿಡ್ -19ರ ಪರಿಣಾಮವಾಗಿ ಮುಚ್ಚಲಾಗಿದ್ದ  ಶಾಲೆಗಳು ಮತ್ತು ಮದರಸಗಳ ಬಾಗಿಲುಗಳನ್ನು ಮತ್ತೆ ತೆರೆಯಲು ಸಿದ್ಧತೆ ಆರಂಭವಾಗಿದೆ. ಕೋವಿಡ್ ಕಾಲದಲ್ಲಿ ಸರಕಾರ ಮತ್ತು ಸಮಸ್ತ ಜಾರಿಗೆ ತಂದಿರುವ ಆನ್ಲೈನ್ ತರಗತಿಗಳು ಅದೆಷ್ಟು ವಿದ್ಯಾರ್ಥಿಗಳಿಗೆ ತಲುಪಿದೆ ಎಂಬುದಕ್ಕಿಂತ ಅದನ್ನು ಸದುಪಯೋಗಪಡಿಸಿಕೊಂಡವರು ನಿಕಟವಾಗಿ ಅದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆಯೇ ಎಂಬುದು ಮುಖ್ಯ.  ಆಕರ್ಷಣೀಯವಾಗಿದ್ದ ಆನ್ಲೈನ್ ತರಗತಿಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತಾದ ಮೇಲ್ಪಂಕ್ತಿಗಳನ್ನು ವಿದ್ಯಾರ್ಥಿಗಳು ಹಾಕಿಕೊಂಡಿದ್ದಾರೆ ಎಂಬುದಂತೂ ನಿಜ. ಹೊಸ ಹೊಸ ಅವಕಾಶಗಳೂ ತೆರೆದುಕೊಂಡಿದೆ. ಕೋವಿಡ್ ನಂತರವೂ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರ ನೇರ ತರಗತಿಗಳಿಂದಲೂ ಆಕರ್ಷಣೀಯ ಮತ್ತು ಆನಂದಕರ ಶಿಕ್ಷಣ ವ್ಯವಸ್ಥೆಯನ್ನು ಬಯಸುವುದು ಸ್ವಾಭಾವಿಕ. 

ಸರಕಾರದ ಮತ್ತು ಸಮಸ್ತದ ಆನ್ಲೈನ್ ತರಗತಿಯ ಅಧ್ಯಾಪಕರು ಸರ್ಕಾರ ಮತ್ತು ಸಮಸ್ತ ಸಜ್ಜುಗೊಳಿಸಿದ ಆಯ್ದ ಅಧ್ಯಾಪಕರು ಎಂಬುದು ವಾಸ್ತವ. ಹೀಗಿದ್ದರೂ ಎಲ್ಲಾ ಮುಅಲ್ಲಿಮರು ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು ತಮಗೆ ಅಲ್ಲಾಹನು ಕರುಣಿಸಿದ  ಅಪಾರ ಅನುಗ್ರಹವಾದ ಬುದ್ಧಿಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲೇ ಬೇಕು. ನಮ್ಮಿಂದಲೂ ಅಂತಹ ತರಗತಿಗಳನ್ನು ನಡೆಸಲು ಸಾಧ್ಯ ಎಂಬುದನ್ನು ಪ್ರಥಮವಾಗಿ ನಮ್ಮಲ್ಲಿ ನಮಗೆ ವಿಶ್ವಾಸವಿರಬೇಕು. 

     ಒಬ್ಬ ಮುಅಲ್ಲಿಂ ಅಥವಾ ಶಿಕ್ಷಕ ಮದರಸ ಅಥವಾ ಶಾಲೆಗಳಲ್ಲಿ  ಬೋಧಿಸುವವನು  ಯಾವುದೇ ಸಮಾಜದ ಸಂಸ್ಥೆಗಳ ಪ್ರಮುಖ ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಬಹುದು. ಏಕೆಂದರೆ ಅವನು ತನ್ನ ವಿದ್ಯಾರ್ಥಿಗಳ ಹೃದಯದಲ್ಲಿ ವಿಭಿನ್ನ ಪರಿಕಲ್ಪನೆಗಳನ್ನು ಹುಟ್ಟುಹಾಕುತ್ತಾನೆ.      ಅಲ್ಲಾಹನ  ಸಂದೇಶವಾಹಕರಾದ ಅಂಬಿಯಾಗಳ ವಾರಸುದಾರರೆಂದು ತಮ್ಮನ್ನು ತಾವು ಮೆಚ್ಚಿಕೊಳ್ಳುವ  ಮುಅಲ್ಲಿಮರು ಪ್ರವಾದಿವರ್ಯರ ಜೀವನಶೈಲಿ ಮತ್ತು ಬೋಧನಾ ರೀತಿಯನ್ನು ತಮ್ಮಲ್ಲಿ ಅಡವಡಿಸಿಕೊಳ್ಳಲು ಪ್ರಯತ್ನಪಡಬೇಕಾಗಿದೆ.            

ಮುಅಲ್ಲಿಮರ/ಶಿಕ್ಷಕರ ಮೇಲೆ ಅನೇಕ ಹಕ್ಕುಗಳು ಮತ್ತು ಕರ್ತವ್ಯಗಳು ಖಂಡಿತಾ ಇದೆ.
ಶಿಕ್ಷಕರು ಸ್ವಯಂ ತರಬೇತಿ ಪಡೆದುಕೊಳ್ಳುವುದು
ಪಠ್ಯಕ್ರಮ ಅಭಿವೃದ್ಧಿ ಮತ್ತು ಇತರ ಮೂಲಗಳ ಮುಖಾಂತರ ಬೋಧನಾ ಕೌಶಲ್ಯಕ್ಕೆ  ಸಮರ್ಪಕವಾದ ಅರ್ಹತೆ ಪಡೆಯುವುದು.
ಆಧುನಿಕ ತಂತ್ರಜ್ಞಾನಗಳು ಮತ್ತು ಬೋಧನಾ ಪ್ರಕ್ರಿಯೆಯ ವಿಧಾನಗಳನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಸಮಗ್ರವಾಗಿ ಅರಿತುಕೊಳ್ಳುವುದು.
ಬೋಧನಾ ಪ್ರಕ್ರಿಯೆಯಲ್ಲಿ ಹೊಸ ವಿಷಯಗಳನ್ನು ಮತ್ತು ಆಕರ್ಷಕ ರೀತಿಗಳನ್ನು ಪ್ರಯೋಗಿಸಲು ಪ್ರಯತ್ನಿಸುವುದು
ವಿದ್ಯಾರ್ಥಿಗಳನ್ನು ಮಿತ್ರರಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ಆರೈಕೆ ಮಾಡುವುದು.
ವಿದ್ಯಾರ್ಥಿಗಳ  ಸಾಧನೆಗಳನ್ನು  ಗುರುತಿಸಿ ದಾಖಲಿಸುವುದು ಮತ್ತು ಅವುಗಳನ್ನು ಇತರರಿಗೆ ಪ್ರಚುರಪಡಿಸುವುದು.
ಮೊದಲಾದವು ಶಿಕ್ಷಕರ  ಹಕ್ಕುಗಳು ಮತ್ತು ಕರ್ತವ್ಯಗಳೆಂದು ವ್ಯಾಖ್ಯಾನಿಸಬಹುದು.               

ಮದರಸ ಮ್ಯಾನೇಜ್ಮೆಂಟ್ ಕಮಿಟಿಯ ಮತ್ತು ಪೋಷಕರ ನಿಲುವುಗಳು ಕೂಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ  ಪ್ರಭಾವ ಬೀರುತ್ತದೆ.


ಶಿಕ್ಷಕರ ಮೌಲ್ಯವನ್ನು ಗೌರವಿಸುವುದು ಮತ್ತು ವಿದ್ಯಾರ್ಥಿಗಳ ಮುಂದೆ ಅವರನ್ನು ಕಿರಿದಾಗಿ ಕಾಣದಿರುವುದು.
ಶಿಕ್ಷಕರಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುವುದು.
ಶಿಕ್ಷಕರ ಸಮಸ್ಯೆಗಳ ಬಗ್ಗೆ ಗಮನವಹಿಸುವುದು

ಶಿಕ್ಷಕರೊಂದಿಗೆ  ಹಿಂಸಾತ್ಮಕವಾಗಿ ವ್ಯವಹರಿಸದಿರುವುದು.

ಶಿಕ್ಷಕರು  ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಮತ್ತು ಅವರ  ಸ್ಥೈರ್ಯವನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಮತ್ತು ಸಕ್ರಿಯವಾಗಿ ಕೆಲಸ ಮಾಡಲು ಪ್ರೋತ್ಸಾಹ ಮತ್ತು ಬಹುಮಾನಗಳನ್ನು ನೀಡುವುದು.
ಶಿಕ್ಷಕರ  ಕೆಲಸದ ಬಗ್ಗೆ ತೃಪ್ತಿ ಮತ್ತು ಸಂತೋಷವನ್ನು ಅನುಭವಿಸುವುದರ ಜೊತೆಗೆ ಶಿಕ್ಷಕರಿಗೆ ಉದ್ಯೋಗ ಭದ್ರತೆಯನ್ನು ನೀಡುವುದು.

ಸಮಾಜದಲ್ಲಿ ಶಿಕ್ಷಕರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಅರಿವು ಹೆಚ್ಚಿಸುವುದು.
ಶಿಕ್ಷಕರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವುಗಳನ್ನು ಲಘುವಾಗಿ ಪರಿಗಣಿಸದಿರುವುದು.
ಮೊದಲಾದವು ಮದರಸಾ ಆಡಳಿತ ಸಮಿತಿ ಹಾಗೂ ಪೋಷಕರ ಕಡೆಯಿಂದ ಮುಅಲ್ಲಿಮರಿಗೆ ಲಭ್ಯವಾದರೆ  ಅವರು  ಸುಲಭವಾಗಿ ಮತ್ತು ಆರಾಮವಾಗಿ ಕಲಿಸಬಹುದು. ಆಡಳಿತ ಸಮಿತಿ ಮತ್ತು ಪೋಷಕರು ನೀಡಿದ ಸಹಾಯ ಸಹಕಾರದ ಫಲ ವಿದ್ಯಾರ್ಥಿಗಳಲ್ಲಿ ಖಂಡಿತಾ ಗೋಚರಿಸಬಹುದು.            

ಶಿಕ್ಷಕರು ಕೂಡಾ ಶಿಸ್ತುಬದ್ಧವಾಗಿರಬೇಕು.
ವಿದ್ಯಾರ್ಥಿಗಳು ತಮ್ಮನ್ನು ಮೆಚ್ಚುವಂತೆ ಸಮಸ್ತದ ಎಮ್.ಎಸ್. ಆರ್  ಸಹಿತ ವಿವಿಧ ನಿಯಮ, ವ್ಯವಸ್ಥೆಗಳು,  ನಿಬಂಧನೆಗಳನ್ನು ಪಾಲಿಸಬೇಕು.
ಶಿಕ್ಷಕ ವೃತ್ತಿಯ ಗೌರವವನ್ನು ಉಲ್ಲಂಘಿಸುವ ಕಾರ್ಯಗಳನ್ನು ದೂರೀಕರಿಸಿ ತಮಗೆ ತಾವೇ ರಕ್ಷಾ ಕವಚವಾಗಿರಬೇಕು.
ವಿದ್ಯಾರ್ಥಿಗಳನ್ನು ಸುಸಂಸ್ಕೃತ ರೀತಿಯಲ್ಲಿ ನೋಡಿಕೊಂಡು, ಹಿಂಸೆ ಮತ್ತು ಖಂಡನೆಯನ್ನು ತಪ್ಪಿಸಬೇಕು.
ವಿದ್ಯಾರ್ಥಿಗಳ ಹೃದಯದಲ್ಲಿ ಹಾನಿಕರವಲ್ಲದ ಪರಿಕಲ್ಪನೆಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ವಹಿಸಬೇಕು.
ವಿದ್ಯಾರ್ಥಿಗಳ ವಿಶೇಷ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಅವುಗಳನ್ನು ಪರಿಹರಿಸಲು ಸಹಾಯ ಮಾಡಬೇಕು.
ಪ್ರತಿದಿನವೂ ವಿದ್ಯಾರ್ಥಿಗಳ ಮೇಲ್ವಿಚಾರಣೆ ನಡೆಸಬೇಕು.
ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಂಡು ಅವರ ನೈತಿಕ ಅಗತ್ಯಗಳನ್ನು ಪೂರೈಸಬೇಕು.
ಸಮಸ್ತ ಮತ್ತು ಎಸ್.ಕೆ.ಎಸ್.ಬಿ.ವಿ ಸಹಿತ ಸಮಸ್ತದ ಎಲ್ಲಾ ಪೋಷಕ ಸಂಘಟನೆಗಳು ಅನುಮೋದಿಸಿದ ಸುತ್ತೋಲೆಗಳಿಗೆ  ಬದ್ಧವಾಗಿರಬೇಕು ಮತ್ತು ಅವುಗಳನ್ನು ಕಾರ್ಯಗತಗೊಳಿಸಬೇಕು.
ಸಮಸ್ತದ ರೇಂಜ್ ಮೋಡೆಲ್ ಕ್ಲಾಸುಗಳು ಹಾಗೂ ಇತರ ಶಿಕ್ಷಕರು ಮಾಡುವ ವಿವಿಧ ಸಭೆಗಳಲ್ಲಿ ಭಾಗವಹಿಸಬೇಕು.
ವಿದ್ಯಾಭ್ಯಾಸ ಬೋರ್ಡಿನ ಮುಫತ್ತಿಶರುಗಳೊಂದಿಗೆ ಸಹಕರಿಸಬೇಕು ಮತ್ತು ಅವರ ನಿರ್ದೇಶನಗಳನ್ನು ಪಾಲಿಸಬೇಕು.
ಇವೆಲ್ಲವೂ ಕೂಡ ಶೈಕ್ಷಣಿಕ ಪ್ರಗತಿಯ ಒಂದು ಭಾಗವೇ ಆಗಿದೆ. 

ಸಮಸ್ತದ ಗೌರವಾನ್ವಿತ ಮುಫತ್ತಿಶರು ಕೂಡ ಮೇಲಧಿಕಾರಿ ಎಂಬ ಭಾವನೆಯೇ ಇಲ್ಲದಂತೆ ಎಲ್ಲರ ಗುಣಕಾಂಕ್ಷಿಗಳಾಗಿ ಶೈಕ್ಷಣಿಕ ಪ್ರಗತಿಯಲ್ಲಿ ಎಲ್ಲರೊಂದಿಗೂ ಬೆರೆತು ಕಾರ್ಯಾಚರಿಸಲಿದ್ದಾರೆ. ಅದಕ್ಕೆ ಬೇಕಾದ ಎಲ್ಲ ವ್ಯಕ್ತಿತ್ವ ವಿಕಸನವನ್ನು ಅವರು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನಿಂದ ಕರಗತ ಮಾಡಿಕೊಂಡಿದ್ದಾರೆ.  
ಸಂಕಷ್ಟದ ಸಮಯದಲ್ಲಿ ತಮ್ಮೊಂದಿಗೆ ನಿಂತ ಸಮಸ್ತ ಮತ್ತು ಅದರ ಪೋಷಕ ಸಂಘಟನೆಗಳು ಕಷ್ಟಸುಖಗಳಲ್ಲಿ ಎಂದಿಗೂ  ಸಾಂತ್ವನವಾಗಿ ತಮ್ಮೆಲ್ಲರ ಜೊತೆಗೆ ನಿಲ್ಲಲಿದೆ. 

ವಿದ್ಯಾರ್ಥಿಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸೃಜನಶೀಲನಾಗಿರಲು ಸಹಾಯ ಮಾಡುವುದು,  ವಿದ್ಯಾರ್ಥಿಗಳು ಪುನರಾವರ್ತಿತ ಮತ್ತು ಬೇಸರಗೊಳ್ಳದಂತೆ ನೋಡಿಕೊಳ್ಳಲು ಬೋಧನಾ ವೃತ್ತಿಯನ್ನು ಅಭಿವೃದ್ಧಿಪಡಿಸುವುದು ಮತ್ತು ಅದರಲ್ಲಿ ಹೊಸತನ ಮತ್ತು ಆಧುನಿಕ ವಿಧಾನಗಳನ್ನು ಪರಿಚಯಿಸುವುದು,  ವಿದ್ಯಾರ್ಥಿಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಿ,  ಪಠ್ಯಕ್ರಮದಲ್ಲಿನ ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು  ಅಧ್ಯಯನ ಮಾಡುವ ಮೊದಲು ಪಾಠಗಳನ್ನು ಸಿದ್ಧಪಡಿಸುವುದು ಮತ್ತು ಪರಿಶೀಲಿಸುವುದು,  ವಿದ್ಯಾರ್ಥಿಗಳೊಂದಿಗೆ ನಾಗರಿಕ ರೀತಿಯಲ್ಲಿ ಮಾತನಾಡುವುದು, ಅವಮಾನಿಸುವುದು ಮತ್ತು ಅವಮಾನಗಳನ್ನು ತಪ್ಪಿಸುವುದು,  ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಂಡು ಅವರ ಆಕರ್ಷಣೀಯ ಇಷ್ಟ ಸಹಪಾಠಿಯಾಗಿ ಅವರಲ್ಲೊಬ್ಬರಾಗುವುದು ಮೊದಲಾದ ಕೋವಿಡ್ 19 ಆನ್ಲೈನ್ ತರಗತಿಗಳಿಂದ ನಾವು ಕಲಿತ ಮಾದರಿಯನ್ನು ಕೋವಿಡ್  ನಂತರದ ನಮ್ಮ ತರಗತಿಗಳಲ್ಲಿ ಕೂಡಾ  ನಾವು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು.ಈ ವಿಧಾನವು ಅವರನ್ನು ಉತ್ತಮವಾಗಿ ಎದುರಿಸಲು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳ ಸ್ಥಿತಿಗತಿಗಳನ್ನು ಶಾಶ್ವತ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಬೇಕು. ಯಾವುದೇ ದೋಷವಿದ್ದಲ್ಲಿ ಅದನ್ನು ಮೌಲ್ಯಮಾಪನ ಮಾಡಬೇಕು ಮತ್ತು ಅದರ ಕಾರಣಗಳನ್ನು ಹುಡುಕಬೇಕು. ವಿದ್ಯಾರ್ಥಿಗಳ ಸಾಮಾನ್ಯ ಹಿತಾಸಕ್ತಿಗೆ ಗಮನ ಕೊಡಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಇರಬೇಕು. ಮತ್ತು ಬೋಧನಾ ವೃತ್ತಿಯನ್ನು ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಬಾರದು. ಏಕೆಂದರೆ ಮುಅಲ್ಲಿಮರು  ಪಿತೃ ಸಮಾನರು. ಮಾತ್ರವಲ್ಲ, ಪಿತೃಗಳಲ್ಲಿ ಉತ್ತಮರಾದವರು. 

ಪೋಷಕರಲ್ಲಿ ಯಾರು ಉತ್ತಮರು ಎಂಬುದನ್ನು ಪುಣ್ಯ ವಚನವೊಂದರಲ್ಲಿ ಹೀಗೆ ವಿವರಿಸಲಾಗಿದೆ:
"ಪಿತೃಗಳು ಮೂವರು. ನಿಮ್ಮ ಮಕ್ಕಳ ತಂದೆ, ನಿಮ್ಮ ಗಂಡನ ತಂದೆ ಮತ್ತು ನಿಮ್ಮ ಜ್ಞಾನದ ತಂದೆ"
ಈ ಉದಾತ್ತ ವಚನ ಮನುಷ್ಯನ ಅಸ್ತಿತ್ವ, ಅವನ ಪಾಲನೆ, ಶಿಕ್ಷಣ, ಶಿಸ್ತು, ಸ್ಥಿರತೆ ಮತ್ತು ಮಾನಸಿಕ ಶಾಂತತೆಯ ವಿಭಾಗದಲ್ಲಿ ಸೇರ್ಪಡೆಗೊಳ್ಳಲು ಕಾರಣವಾದವರ ಬಗ್ಗೆ ಗೌರವವನ್ನು ತೋರಿಸಿ ಅವರಿಗೆ  ಅಭಿಮಾನವನ್ನು ನೀಡುವಂತೆ  ಒತ್ತಾಯಿಸುತ್ತದೆ.     

ಇಲ್ಲಿ ಜನ್ಮ ನೀಡಿದ ತಂದೆಗಿಂತ ಜ್ಞಾನ ನೀಡಿದ ತಂದೆಯೇ ಅತ್ಯುತ್ತಮವೆಂದು ಕರ್ಮಶಾಸ್ತ್ರ ಪಂಡಿತರು ಪ್ರತಿಪಾದಿಸಿದ್ದಾರೆ. ಜನನಕ್ಕೆ ಕಾರಣರಾದವನು ಶರೀರದ ತಂದೆಯಾದರೆ ಜ್ಞಾನ ನೀಡಿದವನು ಆತ್ಮದ ತಂದೆಯೆಂದು ಅವರು ಬಣ್ಣಿಸಿದ್ದಾರೆ.   ಜ್ಞಾನಕ್ಕಿಂತಲೂ  ಮುಖ್ಯವಾದುದು ಬೇರೊಂದಿಲ್ಲ. ಅದು ಪಾರತ್ರಿಕ ಮೋಕ್ಷವನ್ನು ನೀಡುತ್ತದೆ.  ಸೃಷ್ಟಿಕರ್ತನ ಆರಾಧನೆ ಮತ್ತು  ಏಕತ್ವದೆಡೆಗೆ ಒಬ್ಬ ವ್ಯಕ್ತಿಯನ್ನು ಮರಣತನಕ ಕೊಂಡೊಯ್ಯುವುದು ಈ ಧಾರ್ಮಿಕ ಶಿಕ್ಷಣ ವ್ಯವಸ್ಥೆಯೇ ಆಗಿದೆ.  

ಅದಕ್ಕಾಗಿಯೇ ನಂಬಿಕೆ ಮತ್ತು ಉದಾರ ನೀತಿಗಳಿಂದ ಕೂಡಿದ ಪ್ರಾಮಾಣಿಕ ಪ್ರಾಧ್ಯಾಪಕರು, ಸಮಾಜದ ಮೇಲೆ ಭವ್ಯವಾದ ಸ್ಥಾನ ಮತ್ತು ಹೆಚ್ಚಿನ ಆದ್ಯತೆಯನ್ನು ಹೊಂದಿದ್ದಾರೆ. ಮಕ್ಕಳನ್ನು ಬೆಳೆಸುವಲ್ಲಿ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡುವಲ್ಲಿ ಅವರ ಶ್ಲಾಘನೀಯ ಪ್ರಯತ್ನಗಳಿಗೆ ಆಭಾರಿಯಾಗಿರುತ್ತಾರೆ. ಏಕೆಂದರೆ ಅವರು ಸಂಸ್ಕೃತಿಯ ಪ್ರವರ್ತಕರು. ಜ್ಞಾನದ ಪ್ರತಿಪಾದಕರು. ನಾಗರಿಕತೆಯನ್ನು ನಿರ್ಮಿಸುವವರು ಮತ್ತು ಹೊಸ ಪೀಳಿಗೆಯ ನಿರ್ದೇಶಕರು. 

ಆದ್ದರಿಂದಲೇ ಮುಅಲ್ಲಿಮರು  ತಮ್ಮ ವಿದ್ಯಾರ್ಥಿಗಳ ಮೇಲೆ ಕಾಳಜಿ ಮತ್ತು ಗಮನ ವಹಿಸಲೇಬೇಕಾಗಿದೆ.    ಅವರನ್ನು ಒಳ್ಳೆಯತನ ಮತ್ತು ಸದಾಚಾರದ ದಿಕ್ಕಿಗೆ ನಿರ್ದೇಶಿಸುವುದು, ಅವರ ಪ್ರಯತ್ನಗಳನ್ನು ಶ್ಲಾಘಿಸುವುದು ಮತ್ತು ಅವರಿಗೆ ಹೆಚ್ಚಿನ ಆತ್ಮೀಯ ಆತಿಥ್ಯ ಮತ್ತು ಗೌರವವನ್ನು ನೀಡುವುದು,  ವೈಜ್ಞಾನಿಕ ಸಲಹೆಯನ್ನು ಅರ್ಥಮಾಡಿಕೊಡುವುದು,ಪಾಠಗಳು ಮತ್ತು ಹೋಂವರ್ಕ್ ಗಳನ್ನು ಪೂರ್ಣಗೊಳಿಸುವುದು,ಮತ್ತು ಅವರ  ನೈತಿಕತೆಯನ್ನು ಪರಿಷ್ಕರಿಸುವ ಗುರಿ ಮುಅಲ್ಲಿಮರಿಗೆ ಇರಬೇಕು.   

ಪುಣ್ಯ ಪುರುಷರೊಬ್ಬರಲ್ಲಿ  ನಿಮ್ಮ ತಂದೆಯನ್ನು ವೈಭವೀಕರಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ಶಿಕ್ಷಕರನ್ನು ಗೌರವಿಸುತ್ತೀರಿ! ಎಂದು ಕೇಳಲಾದಾಗ ಅವರು ಹೇಳಿದರು: ಏಕೆಂದರೆ ನನ್ನ ಮರಣ ತನಕದ ಜೀವನಕ್ಕೆ ನನ್ನ ತಂದೆ ಕಾರಣ, ಮತ್ತು ಉಳಿದ ಶಾಶ್ವತ ಜೀವನಕ್ಕೆ ನನ್ನ ಮಾರ್ಗದರ್ಶಕರಾದ ಉಸ್ತಾದರುಗಳೇ ಅನಿವಾರ್ಯರಾಗಿದ್ದಾರೆ.!                       

ಈ ಗುರಿ ಮತ್ತು ಕರ್ತವ್ಯವನ್ನು ಅರಿತುಕೊಂಡು ಮೋಕ್ಷದ ಹಾದಿಗೆ ಕೊಂಡೊಯ್ಯುವ ಆದರ್ಶ ವ್ಯವಸ್ಥೆಗೆ ಅನುಗುಣವಾಗಿ ಮಾನವ ಜೀವನವನ್ನು ಸಮನ್ವಯಗೊಳಿಸುವ ಮೌಲ್ಯಗಳು ಮತ್ತು ಆದರ್ಶಗಳಿಗೆ ಬದ್ಧವಾಗಿರಲು ಸದಾ ಅಲ್ಲಾಹನಲ್ಲಿ ನಾವು ಪ್ರಾರ್ಥಿಸೋಣ. ಅಲ್ಲಾಹು ಅನುಗ್ರಹಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ