ಕ್ಷುಲ್ಲಕ ಕಾರಣಕ್ಕೆ ಕೊಲೆ: ತಂದೆ-ಮಗನ ಬಂಧನ

ಕ್ಷುಲ್ಲಕ ಕಾರಣಕ್ಕೆ ಕೊಲೆ: ತಂದೆ-ಮಗನ ಬಂಧನ

ಮಂಗಳೂರು: ನಗರದ ಫ್ಲಾಟ್‌ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ವ್ಯಕ್ತಿಯೊಬ್ಬರನ್ನು ಬಲಿ ಪಡೆದುಕೊಂಡಿದೆ. ಈ ಸಂಬಂಧ ತಂದೆ- ಮಗನನ್ನು ಬಂಧಿಸಲಾಗಿದೆ.

      ನಗರದ ರಥಬೀದಿಯ ಮಹಾಮ್ಮಾಯಿ ರಸ್ತೆಯಲ್ಲಿರುವ ವೀರ ವೆಂಕಟೇಶ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ ಕಾಮತ್(44) ಕೊಲೆಯಾದವರು. ಆರೋಪಿಗಳಾದ ಅದೇ ಅಪಾರ್ಟ್ ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಹಾಗೂ ಅವರ ಮಗ ಅವಿನಾಶ್ ಕಿಣಿಯನ್ನು ಪೊಲೀಸರು ಬಂಧಿಸಿದ್ದಾರೆ.

      4 - 5 ದಿನಗಳ ಹಿಂದೆ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿ ಮಹಾನಗರ ಪಾಲಿಕೆಯು ಸಿಮೆಂಟ್ ಹಾಕಿ ಸರಿ ಮಾಡಿದ್ದು, ಅದರ ಮೇಲೆ ಬೇರೆಯವರ ಕಾರು ಹೋಗುವ ವಿಚಾರದಲ್ಲಿ ಆರೋಪಿಗಳು ತನ್ನ ಗಂಡನೊಂದಿಗೆ ಜಗಳ ಮಾಡಿದ್ದರು ಎಂದು ಮೃತ ವಿನಾಯಕ ಕಾಮತ್ ಅವರ ಪತ್ನಿ‌ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

      ಬುಧವಾರ ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಕೆಲವರು ದೀಪಾವಳಿ ಆಚರಿಸುತ್ತಿದ್ದ ವೇಳೆ ವಿನಾಯಕ್‌ ಅವರು ಅಪಾರ್ಟ್ ಮೆಂಟ್ ಕೆಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರೊಂದಿಗೆ ಜಗಳ ಶುರುವಾಗಿದೆ. ಗಲಾಟೆ ಕೇಳಿ ನನ್ನ ಅತ್ತೆಯೂ ಕೆಳಕ್ಕೆ ಹೋಗಿದ್ದು, ಅವರನ್ನು ತಳ್ಳಿ, ಕೃಷ್ಣಾನಂದ ಕಿಣಿ ತಮ್ಮ ಕೈಯಲ್ಲಿದ್ದ ಚೂರಿಯಿಂದ ವಿನಾಯಕ ಕಾಮತ್ ಅವರ ಎದೆಗೆ ಚುಚ್ಚಿದ್ದಾರೆ. ಅವರ ಮಗ ಅವಿನಾಶ್ ಕಿಣಿ ಕೊಲೆಗೆ ಸಹಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

      ಹಲ್ಲೆಯಿಂದ ಗಂಭೀರ ಗಾಯಗೊಂಡ ವಿನಾಯಕ್ ಕಾಮತ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ 1.45ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.

      ಬಂದರು ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ