ಕೋವಿಡ್-19 ಅನಾಥ ಮಕ್ಕಳ ರಕ್ಷಣೆಗೆ ಮುಂದಾದ ಸುಪ್ರೀಂ ಕೋರ್ಟ್: ರಾಜ್ಯಗಳಿಗೆ ಸೂಚನೆ

ಕೋವಿಡ್-19 ಅನಾಥ ಮಕ್ಕಳ ರಕ್ಷಣೆಗೆ ಮುಂದಾದ ಸುಪ್ರೀಂ ಕೋರ್ಟ್: ರಾಜ್ಯಗಳಿಗೆ ಸೂಚನೆ

ನವದೆಹಲಿ, ಮೇ. 28 : ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಮುಂದಾಗಿದ್ದು, ಅವರ ಮೂಲಭೂತ ಅಗತ್ಯಗಳನ್ನು ರಾಜ್ಯ ಸರಕಾರ ನೋಡಿಕೊಳ್ಳಬೇಕು ಎಂದು ಹೇಳಿದೆ. 2020 ಮಾರ್ಚ್ ನಲ್ಲಿ ವಿಧಿಸಲಾದ ರಾಷ್ಟ್ರವ್ಯಾಪಿ ಲಾಕ್ ಡೌನ್ ನಂತರ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಗುರುತಿಸಲು ಅದು ಇಂದು ಸೂಚಿಸಿದೆ.

      ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾ ಪೀಠವು, ಸಾಂಕ್ರಾಮಿಕ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಗುರುತಿಸಿ, ಅವರ ಬಗೆಗಿನ ಸಮಗ್ರ ಮಾಹಿತಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) 'ಬಾಲ್ ಸ್ವರಾಜ್’ ವೆಬ್‌ಸೈಟ್‌ಗೆ ಶನಿವಾರ ಸಂಜೆಯೊಳಗೆ ಅಪ್‌ಲೋಡ್ ಮಾಡಬೇಕು ಎಂದು ಆಯಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.

      ಈ ಸಾಂಕ್ರಾಮಿಕ ರೋಗದಿಂದಾಗಿ ಎಪ್ತಿಲ್ ಒಂದರಿಂದ ಮೇ 25ರ ಮಧ್ಯೆ ಕನಿಷ್ಟ 577 ಮಕ್ಕಳು ಅನಾಥರಾಗಿದ್ದಾರೆ ಎಂದು  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಒಂದು ಅಂದಾಜಿನಂತೆ ದೇಶದಾದ್ಯಂತ ಸಾವಿರಾರು ಮಕ್ಕಳು ತಮ್ಮ ಒಬ್ಬರು ಅಥವಾ ಇಬ್ಬರೂ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

      ದೇಶದಲ್ಲಿ ಎಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಸಂಕಟವನ್ನು ನೀವು ಅರ್ಥಮಾಡಿಕೊಂಡಿರುವಿರಿ ಎಂದು ಭಾವಿಸುತ್ತೇವೆ. ದಯವಿಟ್ಟು ಅವರ ಅಗತ್ಯಗಳನ್ನು ತಕ್ಷಣವೇ ಪೂರೈಸಲು ರಾಜ್ಯ ಸರ್ಕಾರಗಳಿಗೆ ತಿಳಿಸಿ ಎಂದು ಸರ್ಕಾರದ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು.

      ಅನಾಥ ಮಕ್ಕಳನ್ನು ಗುರುತಿಸಿ, ಅವರಿಗೆ ರಾಜ್ಯ ಸರ್ಕಾರಗಳು ತಕ್ಷಣದ ಪರಿಹಾರವನ್ನು ನೀಡುವಂತೆ ಕೋರಿ ಅಮಿಕಸ್ ಕ್ಯೂರಿ ಗೌರವ್ ಅಗರ್‌ವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.

      ಪೋಷಕರನ್ನು ಕಳೆದುಕೊಂಡ ಮಕ್ಕಳು ಕಳ್ಳಸಾಗಾಣಿಕೆಗೆ ಒಳಗಾಗುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಕಳ್ಳಸಾಗಣೆಯಾದ ಹೆಚ್ಚಿನ ನಿದರ್ಶನಗಳಿರುವುದು ಆತಂಕದ ಸಂಗತಿ. ಕೋವಿಡ್‌ ಎರಡನೇ ಅಲೆಯಲ್ಲಿ ಸಾಂಕ್ರಾಮಿಕ ರೋಗದಿಂದ ಪ್ರತಿಕೂಲ ಪರಿಣಾಮ ಎದುರಿಸುವ ಕುಟುಂಬಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಗೌರವ್ ಅಗರ್‌ವಾಲ್ ಕಳವಳ ವ್ಯಕ್ತಪಡಿಸಿದ್ದರು.

      ಮಕ್ಕಳನ್ನು ಹೊಂದಿರುವ ಅನೇಕ ಪೋಷಕರು ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡು ದುರ್ಬಲರಾಗಿದ್ದಾರೆ. ಬಾಲನ್ಯಾಯ ಕಾಯ್ದೆ –2015ರ ಅಡಿಯಲ್ಲಿ ಕಾರ್ಯ ನಿರ್ವಹಿಸುವವರು ಮತ್ತು ರಾಜ್ಯ ಸರ್ಕಾರಗಳು ಇಂಥ ದುರ್ಬಲ ಕುಟುಂಬಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಪಡಿತರ, ಬಟ್ಟೆ, ಹಣಕಾಸಿನ ನೆರವು ಸೇರಿದಂತೆ ಇತರ ಅಗತ್ಯತೆಗಳನ್ನು ಮನಗಂಡು ಸಹಾಯ ನೀಡಬೇಕು. ಸರ್ಕಾರದ ಯೋಜನೆಗಳ ಅಡಿಯಲ್ಲಿ ತಾತ್ಕಾಲಿಕ ಉದ್ಯೋಗವನ್ನು ಕಲ್ಪಿಸಿಕೊಡಲು ನೆರವಾಗಬೇಕು  ಎಂದೂ ಅವರು ಹೇಳಿದ್ದಾರೆ.

      ಅನಾಥ ಅಥವಾ ನಿರ್ಗತಿಕ ಮಕ್ಕಳನ್ನು ನೋಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಎಂದು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭತಿ ನ್ಯಾಯಾಲಯದ ಗಮನಕ್ಕೆ ತಂದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ