ಕಿವಿಗೆ ಗಾಯ: ದಾಳಿಯಿಂದ ಪಾರಾದ ಬಳಿಕ ಟ್ರಂಪ್ ಮೊದಲ ಪ್ರತಿಕ್ರಿಯೆ ಹೀಗಿತ್ತು...

ಕಿವಿಗೆ ಗಾಯ: ದಾಳಿಯಿಂದ ಪಾರಾದ ಬಳಿಕ ಟ್ರಂಪ್ ಮೊದಲ ಪ್ರತಿಕ್ರಿಯೆ ಹೀಗಿತ್ತು...

ವಾಷಿಂಗ್ಟನ್: ತಮ್ಮ ಮೇಲಿನ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುಂಡೇಟಿನಿಂದ ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಗಾಯವಾಗಿದೆ ಎಂದು ಹೇಳಿದ್ದಾರೆ.

      ಸಾಮಾಜಿಕ ಮಾಧ್ಯಮ 'ಟ್ರುಥ್'ನ ತಮ್ಮ ಅಧಿಕೃತ ಖಾತೆಯಲ್ಲಿ ಟ್ರಂಪ್ ಈ ಕುರಿತು ಬರೆದುಕೊಂಡಿದ್ದು, 'ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುತ್ತಿರುವುದನ್ನು ನಂಬಲಾಗುತ್ತಿಲ್ಲ' ಎಂದು ಹೇಳಿದ್ದಾರೆ.

      'ಕಿರುಚಾಟ ಕೇಳಿದ ತಕ್ಷಣ ಏನೋ ಆಗಿದೆ ಎಂದು ಗೊತ್ತಾಯಿತು. ಅಷ್ಟರಲ್ಲಿ ಗುಂಡಿನ ಶಬ್ದ ಕೇಳಿಸಿತು. ಗುಂಡು ಚರ್ಮದ ಮೂಲಕ ಹಾದು ಹೋದಂತೆ ಭಾಸವಾಯಿತು. ಹೆಚ್ಚು ರಕ್ತಸ್ರಾವವಾಯಿತು. ಆಗಲೇ ಏನಾಗಿದೆ ಎಂದು ತಿಳಿಯಿತು' ಎಂದು ಹೇಳಿದ್ದಾರೆ.

      'ತಕ್ಷಣ ಕಾರ್ಯಪ್ರವೃತರಾಗಿ ಕ್ರಮ ಕೈಗೊಂಡಿರುವ ಅಮೆರಿಕದ ಸೀಕ್ರೆಟ್ ಸರ್ವಿಸ್, ಕಾನೂನು ಜಾರಿ ಸಂಸ್ಥೆಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

      'ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನಾನು ಸಂತಾಪವನ್ನು ಸೂಚಿಸುತ್ತೇನೆ. ತೀವ್ರವಾಗಿ ಗಾಯಗೊಂಡವರ ಕುಟುಂಬಕ್ಕೂ ಸಾಂತ್ವನವನ್ನು ಹೇಳ ಬಯಸುತ್ತೇನೆ' ಎಂದು ಹೇಳಿದ್ದಾರೆ.

     ಶಂಕಿತ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ಖಚಿತಪಡಿಸಿದ್ದಾರೆ.

     ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ರ‍್ಯಾಲಿ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂದಲೆಳೆಯ ಅಂತರದಿಂದ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ