ಕಳ್ಳತನ ಪ್ರಕರಣ: 40ಲಕ್ಷ ರೂ.ಮೌಲ್ಯದ ಮೊಬೈಲ್ ಸಹಿತ ಓರ್ವನ ಬಂಧನ

ಮಂಗಳೂರು: ಬಲ್ಮಠದಲ್ಲಿರುವ ಮ್ಯಾಪಲ್ ಮೊಬೈಲ್ ಶೋರೂಂನಲ್ಲಿ ಒಂದು ತಿಂಗಳ ಹಿಂದೆ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಮಹಾರಾಷ್ಟ್ರ ಮೂಲದ ಓರ್ವನನ್ನು ಬಂಧಿಸಿದ್ದು ಆತನಿಂದ ಲಕ್ಷ ರೂಪಾಯಿ ಮೌಲ್ಯದ 41 ಆ್ಯಪಲ್ ಐಪೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಓರ್ವ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೇ ಮುಂಬೈನಲ್ಲಿ ಕಳವು ಸೇರಿದಂತೆ 9 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು. ಈ ಕೃತ್ಯದಲ್ಲಿ ಇನ್ನೋರ್ವ ಭಾಗಿಯಾಗಿದ್ದು ಆತನನ್ನು ಕೂಡ ಬಂಧಿಸಲಾಗುವುದು. ಮೊಬೈಲ್ ಶೋರೂಂನಿಂದ 54 ಲಕ್ಷ ರೂಪಾಯಿ ಮೌಲ್ಯದ 68 ಆ್ಯಪಲ್ ಐಪೋನ್ ಮೊಬೈಲ್ ಪೋನ್ಗಳು, 1,15,888 ರೂಪಾಯಿ ನಗದು, ಸಿಸಿ ಕೆಮರಾ ಡಿವಿಆರ್ ಕಳವಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ನಗರದ ಸಿಸಿಬಿ ತಂಡ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಹಿನ್ನೆಲೆಯಲ್ಲಿ ತಂಡಕ್ಕೆ 10,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಕಳ್ಳರು ಕಳ್ಳತನ ಮಾಡುವ ಸುಮಾರು 3 ದಿನಗಳ ಹಿಂದೆ ಮುಂಬೈನಿಂದ ನಗರಕ್ಕೆ ಆಗಮಿಸಿ 5-6 ಮೊಬೈಲ್ ಅಂಗಡಿಗಳನ್ನು ಸರ್ವೆ ಮಾಡಿದ್ದರು. ಎಲ್ಲೆಲ್ಲಾ ಭದ್ರತೆ ಸರಿಯಾಗಿಲ್ಲ, ಎಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಖಚಿತ ಪಡಿಸಿಕೊಂಡಿದ್ದರು. ಗ್ರಾಹಕರ ಸೋಗಿನಲ್ಲಿ ಮೊಬೈಲ್ ಶೋರೂಂಗಳಿಗೆ ಹೋಗಿ ವಾಶ್ರೂಂ ಉಪಯೋಗಿಸುವ ನೆಪದಲ್ಲಿ ಒಳಗೆ ತಿರುಗಾಡಿ ಕಳ್ಳತನ ಮಾಡಲು ಸುಲಭ ದಾರಿ ಎಲ್ಲಿದೆ ಎಂಬ ಮಾಹಿತಿಗಳನ್ನು ಕೂಡಾ ತಿಳಿದುಕೊಂಡು ಹೋಗಿದ್ದರು. ಅದರಂತೆ ಒಂದು ದಿನ ಬಲ್ಮಠದ ಈ ಮೊಬೈಲ್ ಶೋರೂಂಗೆ ಬಂದು ನಿರ್ದಿಷ್ಟ ಸ್ಥಳವೊಂದರಲ್ಲಿ 2-3 ಸರಳುಗಳನ್ನು ಮಾತ್ರ ತುಂಡರಿಸುವ ಮೂಲಕ ಸುಲಭವಾಗಿ ಒಳಗೆ ಹೊಕ್ಕಿದ್ದಾರೆ. ಇಷ್ಟು ದೊಡ್ಡ ಮೊಬೈಲ್ ಶೋರೂಂನಲ್ಲಿ ಸೈರನ್ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳು ಇರಲಿಲ್ಲ. 2-3 ವರ್ಷಗಳ ಹಿಂದೆ ಕೂಡ ಇದೇ ಶೋರೂಂನಲ್ಲಿ ಕಳ್ಳತನ ನಡೆದಿದ್ದರೂ ಮಾಲಕರು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಡಿ.ಸಿ.ಪಿ ಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ