ಕಾರು ನನ್ದು, ಯಾಕ್ರೀ ಟೋಯಿಂಗ್‌ ಮಾಡ್ತೀರಾ: ಪೋಲೀಸರಿಗೆ ಆವಾಝ್‌ ಹಾಕಿದ ಮಹಿಳೆ

ಕಾರು ನನ್ದು, ಯಾಕ್ರೀ ಟೋಯಿಂಗ್‌ ಮಾಡ್ತೀರಾ: ಪೋಲೀಸರಿಗೆ ಆವಾಝ್‌ ಹಾಕಿದ ಮಹಿಳೆ

ಬೆಂಗಳೂರು: ನೋ ಪಾರ್ಕಿಂಗ್‌’ ಸ್ಥಳದಲ್ಲಿ ನಿಲ್ಲಿಸಿದ್ದ ಕಾರೊಂದನ್ನು ಟೋಯಿಂಗ್‌ ಮಾಡಲೆತ್ನಿಸಿದ ಟ್ರಾಫಿಕ್ ಪೋಲೀಸರಿಗೆ ಮಹಿಳೆಯೊಬ್ಬರು ಆವಾಜ್‌ ಹಾಕಿದ ಘಟನೆ ಬೆಂಗಳೂರಿನ ಇಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದೆ.

      ಇಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಏರ್‌ಟೆಲ್‌ ಮಳಿಗೆಗೆ ಬಂದಿದ್ದ ಮಹಿಳೆಯೊಬ್ಬರು ಕಾರನ್ನು ‘ನೋ ಪಾರ್ಕಿಂಗ್‌’ ಸ್ಥಳದಲ್ಲಿ ನಿಲ್ಲಿಸಿದ್ದರು. ಹೀಗಾಗಿ ಸಂಚಾರ ಪೊಲೀಸರು ಕಾರನ್ನು ಟೋಯಿಂಗ್‌ ಮಾಡಲು ಮುಂದಾದರು. ಇದರಿಂದ ಕೆರಳಿದ ಮಹಿಳೆ, ರೀ, ಕಾರು ನನ್ನದು. ಯಾಕ್ರೀ ಟೋಯಿಂಗ್‌ ಮಾಡ್ತಿದ್ದೀರಾ... ಎಂದು ಟೋಯಿಂಗ್‌ ವಾಹನ ಏರಿ ಗಲಾಟೆ ಆರಂಭಿಸಿದರು.

      ಟೋಯಿಂಗ್‌ ಮಾಡುವ ಮುನ್ನ ಪೊಲೀಸರು ವಾಹನ ಸಂಖ್ಯೆಯನ್ನು ಕೂಗಬೇಕಿತ್ತು. ಕಾರಿನ ಮಾಲೀಕರು ಯಾರು ಎಂಬುದನ್ನೂ ಕೇಳಬೇಕಿತ್ತು. ಈ ಕೆಲಸವನ್ನು ಮಾಡಿಲ್ಲ. ಕೆಲಸದ ಮೇಲೆ ಏರ್‌ಟೆಲ್‌ ಕಚೇರಿಗೆ ಬಂದಿದ್ದೇನೆ. ಒಂದು ಗಂಟೆಯವರೆಗೂ ಇಲ್ಲಿ ಕಾಯಬೇಕು. ಅಲ್ಲಿಯವರೆಗೂ ಕಾರು ನಿಲ್ಲಿಸುವುದು ಎಲ್ಲಿ ಎಂದು ಮಹಿಳೆ ಪ್ರಶ್ನಿಸಿದರು.

      ನೋ ಪಾರ್ಕಿಂಗ್‌ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ದಂಡವನ್ನು ಪಾವತಿಸಿ. ನಾವು ವಾಹನ ಬಿಟ್ಟು ಹೋಗುತ್ತೇವೆ ಎಂದು ಪೊಲೀಸರು ತಿಳಿಸಿದರು. ಎಷ್ಟು ಕೊಡಬೇಕು ಎಂದು ಮಹಿಳೆ ಕೇಳಿದಾಗ, ರೂ.500 ಅಥವಾ ರೂ.1,000 ಆಗಬಹುದು ಎಂದು ಸಿಬ್ಬಂದಿ ಹೇಳಿದರು. ಆಗ ಮಹಿಳೆ ನಾನ್ಯಾಕೆ ಕೊಡಲಿ, ಏರ್‌ಟೆಲ್‌ ಕಂಪನಿಯವರನ್ನು ಕೇಳಿ ಎಂದು ತಗಾದೆ ತೆಗೆದರು.

       ಪೊಲೀಸರು ಮತ್ತು ಮಹಿಳೆಯ ಜಟಾಪಟಿಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ನಗರಗಳಲ್ಲಿ ಸಾರ್ವಜನಿಕ ಸೇವೆ ಒದಗಿಸುವ ಸಂಸ್ಥೆಗಳಿಗೆ ಅನುಮತಿ ನೀಡುವಾಗ ಸಾಕಷ್ಟು ಪಾರ್ಕಿಂಗ್‌ ವ್ಯವಸ್ಥೆ ಇದೆಯಾ ಎಂದು ಪರಿಶೀಲಿಸಬೇಕಾದ ಜವಾಬ್ದಾರಿ ಯಾರದು ಎನ್ನುವ ಪ್ರಶ್ನೆ ಮೂಡುತ್ತದೆ. ಹೆಚ್ಚಿನ ಕಟ್ಟಡಗಳಲ್ಲಿ ಪಾರ್ಕಿಂಗ್‌ ವ್ವವಸ್ಥೆ ಇಲ್ಲದಿದ್ದರೂ, ರಸ್ತೆಗಳನ್ನೇ ಪಾರ್ಕಿಂಗ್‌ ಸ್ಥಳವನ್ನಾಗಿ ಉಪಯೋಗಿಸುತ್ತಿದ್ದರೂ ಪರವಾನಿಗೆಗಳು ನಿರಾತಂಕವಾಗಿ ಲಭಿಸುತ್ತಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ