ಕೇರಳ ಶಾಸನ ಸಭೆಯಲ್ಲಿ ಮೊಳಗಿದ ಕನ್ನಡ: ಮಂಜೇಶ್ವರ ಶಾಸಕರಿಂದ ಕನ್ನಡದಲ್ಲಿ ಪ್ರಮಾಣವಚನ

ಕೇರಳ ಶಾಸನ ಸಭೆಯಲ್ಲಿ ಮೊಳಗಿದ ಕನ್ನಡ: ಮಂಜೇಶ್ವರ ಶಾಸಕರಿಂದ ಕನ್ನಡದಲ್ಲಿ ಪ್ರಮಾಣವಚನ

ಮಂಜೇಶ್ವರ, ಮೇ 24: ಬಹುಭಾಷಾ ಸಂಗಮ ಭೂಮಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಎ.ಕೆ.ಎಂ ಅಶ್ರಫ್ ರವರು ಇಂದು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
      ಈ ಮೂಲಕ ಕಾಸರಗೋಡು ಜಿಲ್ಲೆಯ ಬಹುಸಂಖ್ಯಾತ ಕನ್ನಡಿಗರ ಹೃದಯ ಗೆದ್ದು, ಕೇರಳ ವಿಧಾನಸಭೆಯಲ್ಲಿ ಕನ್ನಡಿಗರ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಕಾಸರಗೋಡು ಜಿಲ್ಲೆ ಭೌಗೋಳಿಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅಲ್ಲಿ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ರೂಪುಗೊಂಡು ಮೂರೂವರೆ ದಶಕಗಳು ಕಳೆದರೂ ಇಲ್ಲಿನ ಭಾಷೆ, ಸಂಸ್ಕೃತಿ, ಪ್ರಾದೇಶಿಕ ಅಭಿವೃದ್ಧಿಯಲ್ಲಿ ಇನ್ನೂ ಹಿಂದುಳಿದೆ.
      ಕೇರಳ ಶಾಸನಸಭೆಯಲ್ಲಿ ಎಕೆಎಂ ಅಶ್ರಫ್ ಅಚ್ಚ ಕನ್ನಡಿಗರಾಗಿ, ಕನ್ನಡ ಭಾಷೆಯಲ್ಲಿ ಅಲ್ಲಾಹನ ನಾಮದಲ್ಲಿ ಸತ್ಯ ಪ್ರತಿಜ್ಞೆಗೈದಿರುವುದು ಜನತೆಯಲ್ಲಿ ಒಂದಷ್ಟು ಭರವಸೆ ಹುಟ್ಟಿಸಿದೆ. ಜಿದ್ದಾ ಜಿದ್ದಿನ ಹೋರಾಟದಲ್ಲಿ ಜನ ಅಶ್ರಫ್ ರವರ ಕೈಹಿಡಿದು ಕೋಮುವಾದವನ್ನು ಸೋಲಿಸಿದ್ದಾರೆ. ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಭಾರವೂ ಅಶ್ರಫ್ ರವರ ಮೇಲಿದೆ.
      ತನ್ನ ಹತ್ತನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ತನ್ನ  ಅಭಿರುಚಿಗೆ ಅನುಗಣವಾಗಿ ರಾಜಕೀಯವನ್ನು ಆಯ್ಕೆ ಮಾಡಿಕೊಂಡವರು. ಎಂಎಸ್‌ಎಫ್‌ನ ಪಂಚಾಯತ್, ಕ್ಷೇತ್ರ, ಜಿಲ್ಲೆ, ರಾಜ್ಯ ಸಮಿತಿ ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಯೂತ್ ಲೀಗಿನ ರಾಜ್ಯ ಪದಾಧಿಕಾರಿಯಾಗಿ, ಪಾಣಕ್ಕಾಡ್ ಕುಟುಂಬದ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.
      ತಮ್ಮಸಾರ್ವಜನಿಕ ಜೀವನದಲ್ಲಿ ಹಲವಾರು ಜನಪರವಾದ ಹೋರಾಟಗಳನ್ನು ಸಂಘಟಿಸಿ ಜನಾನುರಾಗಿಯಾದವರು. ಪ್ರತ್ಯೇಕವಾಗಿ ಮಂಜೇಶ್ವರ ಗಡಿನಾಡ ಪ್ರದೇಶವಾದ್ದರಿಂದ ಸಹಜವಾಗಿಯೇ ವಿವಿಧ ಸಮಸ್ಯೆಗಳು ಎದುರಾದಾಗಲೂ ಸಾಮಾನ್ಯ ಜನತೆಯ ಜೊತೆ ಗುರುತಿಸಿಕೊಂಡವರು. 
      ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿಕೊಂಡ ಎ.ಕೆ.ಎಂ ಅಶ್ರಫ್, ಮಲೆಯಾಳಂ, ಕನ್ನಡ, ತುಳು, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲರಾಗಿದ್ದಾರೆ.
      ಅಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಶಾಸಕ ಎ.ಕೆ.ಎಂ ಅಶ್ರಫ್, ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್, ಅಂಡರ್ ಆರ್ಮ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದರು‌.
2010ರಿಂದ 2015 ರವರೆಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾಗಿ, 2015ರಿಂದ 2020ರ ತನಕ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ,  ಆಡಳಿತ ಅನುಭವವನ್ನು ಹೊಂದಿದವರು. ಕ್ಷೇತ್ರದ ಹೆಚ್ಚಿನ ಜನರನ್ನು ಹತ್ತಿರದಿಂದಲೇ ಬಲ್ಲವರು. ಅತೀ ಹೆಚ್ಚು ಜನಸಂಖ್ಯೆಯಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯ ಹರಿಕಾರನಾಗಿ, ಎ.ಕೆ.ಎಂ ಅಶ್ರಫ್‌ರನ್ನು ಜನರು ಎದುರು ನೋಡುತ್ತಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ, ಒತ್ತಡ ಎಕೆಎಂರವರ ಮೇಲಿದೆ. 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ