ಬೆಡ್ ಬ್ಲಾಕಿಂಗ್ ಹಗರಣ: ಎಚ್ಚೆತ್ತುಕೊಂಡ ತೇಜಸ್ವಿ ಸೂರ್ಯ ಕ್ಷಮಾಪಣೆ

ಬೆಂಗಳೂರು: ವಿವಾದಾತ್ಮಕ ಬೆಡ್ ಬ್ಲಾಕಿಂಗ್ ಹಗರಣವನ್ನು ಸಂಸದ ತೇಜಸ್ವಿ ಸೂರ್ಯ, ಸರಕಾರದ ವೈಫಲ್ಯತೆಯನ್ನು ಮುಚ್ಚಿ ಹಾಕಲು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೋರೋನಾ ವಾರ್ ರೂಮಿನಲ್ಲಿ ಕೆಲಸ ನಿರ್ವಹಿಸುವ ಮುಸ್ಲಿಂ ಸಿಬ್ಬಂದಿಗಳ ಮೇಲೆ ಮಾತ್ರ ಆರೋಪ ಹೊರಿಸುವ ಮೂಲಕ ಹಗರಣಕ್ಕೆ ಕೋಮು ಬಣ್ಣಹಚ್ಚಲು ಪ್ರಯತ್ನಿಸಲಾಗಿತ್ತು. ವ್ಯಾಪಕ ಪ್ರತಿರೋಧದಿಂದ ಎಚ್ಚೆತ್ತುಕೊಂಡ ಸಂಸದರು ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ಬಿಬಿಎಂಪಿಯ ದಕ್ಷಿಣ ವಲಯ ಕೋವಿಡ್ ವಾರ್ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಕ್ಷಮೆ ಕೋರಿದ್ದಾರೆ.
ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದಿದ್ದ ತೇಜಸ್ವಿ ಸೂರ್ಯ, ಈ ವೇಳೆ 17 ಮುಸ್ಲಿಂ ನೌಕರರ ಹೆಸರು ಮಾತ್ರ ಉಲ್ಲೇಖಿಸಿ ನೇರ ಆರೋಪ ಮಾಡಿದ್ದರು. ಆದರೆ, 200ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುವ ಈ ವಾರ್ ರೂಮ್‌ನ ಹಾಸಿಗೆ ನಿಯೋಜನೆ ವಿಭಾಗದಲ್ಲಿ ಒಬ್ಬ ಮುಸ್ಲಿಂ ಯುವಕ ಮಾತ್ರ ಕೆಲಸ ಮಾಡುತ್ತಿದ್ದರು. ಬೆಡ್ ಬ್ಲಾಕಿಂಗ್ ಹಗರಣಕ್ಕೆ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದ್ದಾರೆ ಎಂದು ಸಂಸದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಈ ಪ್ರಕರಣವನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ತನಿಖೆ ನಡೆಸುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಈ ವೇಳೆ ನನ್ನ ಮಾತು ಅಥವಾ ನಡೆಯಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪ್ರಕರಣದ ನಂತರ, ವಾರ್ ರೂಮ್ ನ ಹಲವು ಸಿಬ್ಬಂದಿ ರಜೆ ತೆಗೆದುಕೊಂಡಿದ್ದಾರೆ. ಈ ತುರ್ತು ಸಂದರ್ಭದಲ್ಲಿ ರಜೆ ಹಾಕಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿಕೊಂಡವರ ವಿರುದ್ಧ ಮಾತ್ರ ನಾವು ಕ್ರಮ ಕೈಗೊಳ್ಳುತ್ತೇವೆ. ಉಳಿದವರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ