ಕರ್ನಾಟಕದ ಎರಡು ಬೀಚ್‌ ಗಳಿಗೆ ಬ್ಲೂ ಫ್ಲಾಗ್ ಗರಿ

ಕರ್ನಾಟಕದ ಎರಡು ಬೀಚ್‌ ಗಳಿಗೆ  ಬ್ಲೂ ಫ್ಲಾಗ್ ಗರಿ

ಕಾರವಾರ : ಉಡುಪಿ ಜಿಲ್ಲೆಯ ಪಡುಬಿದ್ರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ  ಹೊನ್ನಾವರ ಕಾಸರಕೋಡು ಸೇರಿದಂತೆ ದೇಶದ ಎಂಟು ಕಡಲತೀರಗಳಲ್ಲಿ ಪ್ರತಿಷ್ಠಿತ 'ಬ್ಲೂ ಫ್ಲಾಗ್' ಅನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ ಜಾವಡೇಕರ್ ಸೋಮವಾರ ಅನಾವರಣಗೊಳಿಸಿದರು. ವರ್ಚುವಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಾದ್ಯಂತ 100 ಕಡಲತೀರಗಳನ್ನು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಎಂಟು ಕಡಲತೀರಗಳಲ್ಲಿ ಬ್ಲೂ ಫ್ಲಾಗ್ ಅನಾವರಣಗೊಳಿಸಲಾಗಿದೆ ಎಂದು ಹೇಳಿದರು.
     ಭಾರತದ ಕಡಲ ತೀರಗಳು ಅಂತರ್ರಾಷ್ಟ್ರೀಯ ಮನ್ನಣೆ ಪಡೆದಿರುವುದು, ಭಾರತವು ಕಡಲತೀರದ ಗುಣಮಟ್ಟ ಕಾಪಾಡಲು ಕೈಗೊಂಡಿರುವ ಕ್ರಮಗಳು ಸುಸ್ಥಿರವಾಗಿದೆ ಮತ್ತು ಅಭಿವೃದ್ಧಿಯ ಸೂಚಕವಾಗಿದೆ.  ಪ್ರವಾಸೋದ್ಯಮ ಹಾಗೂ ಸಮುದ್ರ ಮಾಲಿನ್ಯ ತಡೆಯುವ ದೃಷ್ಟಿಯಿಂದ ಜನಾಂದೋಲನ ಆಗಬೇಕಿದೆ ಎಂದು ಅವರು ಆಶಿಸಿದರು.
ಡಾರ್ಕ್‌ನ ಕೋಪನ್ ಹೇಗನ್‌ನಲ್ಲಿರುವ 'ಪರಿಸರ ಶಿಕ್ಷಣಕ್ಕಾಗಿ ವೇದಿಕೆ'ಯು ( Foundation for Environmental Education) ಜಾಗತಿಕ ಮಟ್ಟದ ಕಡಲತೀರಗಳನ್ನು ಗುರುತಿಸಲು 'ಬ್ಲೂ ಫ್ಲಾಗ್' ಮನ್ನಣೆಯನ್ನು ನೀಡುತ್ತದೆ. ಇದಕ್ಕಾಗಿ ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರಸ್ನೇಹಿ ನಿರ್ಮಾಣಗಳು ಸೇರಿದಂತೆ ಸುಮಾರು 33 ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯದ ಕಾಸರಕೋಡು, ಪಡುಬಿದ್ರಿ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ತಾ , ಕೇರಳದ ಕಾಪ್ಪಾಡ್, ಆಂಧ್ರ ಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಮತ್ತು ಅಂಡಮಾನ್ ದ್ವೀಪದ ರಾಧಾನಗರ ಕಡಲತೀರ ಗಳನ್ನು 'ಬ್ಲೂ ಫ್ಲಾಗ್' ಮನ್ನಣೆಗೆ ಶಿಫಾರಸು ಮಾಡಿತ್ತು. ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಮಾತ್ರ ಈವರೆಗೆ ಪ್ರತಿಷ್ಠಿತ ಬ್ಲೂ ಫ್ಲಾಗ್ ಮನ್ನಣೆ ಪಡೆದಿದ್ದವು. ಈಗ ಭಾರತವೂ ಈ ಸಾಲಿಗೆ ಸೇರ್ಪಡೆಗೊಂಡಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ