ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಇನ್ನಿಲ್ಲ

ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಇನ್ನಿಲ್ಲ
ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಇನ್ನಿಲ್ಲ

ಮಂಗಳೂರು: ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಜ್ಯಸಭಾ ಸದಸ್ಯ, ಆಸ್ಕರ್ ಫೆರ್ನಾಂಡಿಸ್ ಇಂದು ವಿಧಿವಶರಾಗಿದ್ದಾರೆ.

      ಅವರು ಇತ್ತೀಚೆಗೆ ಯೋಗ ಮಾಡುತ್ತಿದ್ದಾಗ ಜಾರಿ ಬಿದ್ದು, ತಲೆಗೆ ಪೆಟ್ಟಾಗಿದ್ದರಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಈ ಹಿನ್ನೆಲೆಯಲ್ಲಿ, ಆಸ್ಕರ್ ಫರ್ನಾಂಡಿಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

      ಉಡುಪಿಯಲ್ಲಿ 1972ರಲ್ಲಿ ಉಡುಪಿ ಪುರಸಭೆಗೆ ಜನರಿಂದ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದ ಆಸ್ಕರ್, 1980ರಲ್ಲಿ ತನ್ನ ರಾಜಕೀಯ ಗುರು ಟಿ.ಎ.ಪೈ ಅವರನ್ನೇ ಮಣಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಒಮ್ಮಿಂದೊಮ್ಮೆಗೆ ರಾಷ್ಟ್ರರಾಜಕಾರಣಕ್ಕೆ ನೆಗೆದವರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಐದು ಬಾರಿ ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾಗಿ (1980-1996)  ಚುನಾಯಿತರಾಗಿದ್ದ ಅವರು, ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಾ.ಮನಮೋಹನ್ ಸಿಂಗ್ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

      ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

      ಸರಳ ವ್ಯಕ್ತಿತ್ವದ ಆಸ್ಕರ್ ಫೆರ್ನಾಂಡಿಸ್ ಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಪುತ್ರ ಹಾಗೂ ಪುತ್ರಿಯೊಂದಿಗೆ ಅಪಾರ ಸಂಖ್ಯೆಯ ಬಂಧುಮಿತ್ರರು, ನಿಕಟವರ್ತಿಗಳು, ಅಭಿಮಾನಿಗಳು ಹಾಗೂ ಹಿಂಬಾಲಕರನ್ನು ಅಗಲಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ