ಉಪ ಕುಲಪತಿ ನೇಮಕಾತಿ ತಾರತಮ್ಯ: ಕಾಂಗ್ರೆಸ್ಸಿನಿಂದ ಸಿಗದ ಸಾಮಾಜಿಕ ನ್ಯಾಯದ ವಿರುದ್ಧ ಬಾಫಕೀ ತಂಙಳ್ ಫೌಂಡೇಶನ್ ಹೋರಾಟ
ರಾಜ್ಯದ ವಿಶ್ವ ವಿದ್ಯಾಲಯಗಳಿಗೆ ಉಪ ಕುಲಪತಿಗಳ ನೇಮಕಾತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಲ್ಲ. ಪ್ರೊ.ಅಸಾದಿಯವರಂತಹ ಹಿರಿಯ ವಿದ್ವಾಂಸರನ್ನು ಕಡೆಗಣಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿ ಯವರಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ.

ಮಂಗಳೂರು: ರಾಜ್ಯದ ವಿಶ್ವ ವಿದ್ಯಾಲಯಗಳಿಗೆ ಉಪ ಕುಲಪತಿಗಳ ನೇಮಕಾತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಲ್ಲ ಎಂದು ಇಲ್ಲಿನ ಭಾಫಕೀ ತಂಙಳ್ ಟ್ರಸ್ಟ್ ಆರೋಪಿಸಿದೆ.
ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ನೇಮಕವು ಈಗ ವಿವಾದಗ್ರಸ್ಥವಾಗಿದೆ. ಹಲವು ತಿಂಗಳಿನಿಂದ ರಾಜ್ಯದಲ್ಲಿ ತೆರವಾಗಿದ್ದ ವಿವಿ ಉಪಕುಲಪತಿ ಹುದ್ದೆ ನೇಮಕ ಮಾಡುವ ಪ್ರಕ್ರಿಯೆಯು ರಾಜ್ಯ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿತ್ತು. ಸಂಪ್ರದಾಯದಂತೆ ಈ ಉನ್ನತ ಹುದ್ದೆಗೆ ಯೋಗ್ಯರಾದವರ ಯಾದಿಯನ್ನು ತಯಾರಿಸಿದ ಶೋಧನಾ ಸಮಿತಿಯು ರಾಜ್ಯ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿತ್ತು.
ಮಂಗಳೂರು ವಿ.ವಿ ಯ ಉಪಕುಲಪತಿ ಸ್ಥಾನಕ್ಕೆ ಸಲ್ಲಿಸಲಾದ ಯಾದಿಯಲ್ಲಿ ಮೊದಲನೆಯ ಹೆಸರು ರಾಜ್ಯದ ಹಿರಿಯ ವಿದ್ವಾಂಸರು ಎಲ್ಲಾ ದೃಷ್ಟಿಯಿಂದಲೂ ಯೋಗ್ಯರಾದ ಪ್ರೊಫೆಸರ್ ಮುಝಫರ್ ಆಸಾದಿಯವರದ್ದಾಗಿತ್ತು. ಆದರೆ ಈಗ ಪ್ರೊ.ಮುಝಫರ್ ಆಸದಿ ಅವರನ್ನು ಕೈ ಬಿಟ್ಟು ಹಲವಾರು ವರ್ಷಗಳಿಂದ ಇದೇ ವಿ.ವಿ ಯಲ್ಲಿದ್ದವರೊಬ್ಬರನ್ನು ಉಪಕುಲಪತಿಗಳಾಗಿ ನೇಮಿಸಿದ್ದಾರೆ. ನೇಮಕದ ಆದೇಶ ಹೊರಬಿದ್ದ ತಕ್ಷಣವೇ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ತರಾತುರಿ ಮಂಗಳೂರು ವಿ.ವಿಯಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ನಡೆಯುತ್ತಿರುವ ಅವ್ಯವಹಾರಗಳನ್ನು ಮುಚ್ಚಿ ಹಾಕುವ ಸಂಚೆಂಬ ಅನುಮಾನ ಮೂಡುತ್ತಿದೆ ಎಂದು ಬಾಫಕಿ ತಂಙಳ್ ಫೌಂಡೇಷನ್ ಆರೋಪಿಸಿದೆ.
1980 ರಲ್ಲಿ ಹೆಸರಾಂತ ಇತಿಹಾಸ ತಜ್ಞರಾದ ಪ್ರೊ.ಶೇಖ್ ಅಲೀಯವರು ಪ್ರಥಮ ಉಪಕುಲಪತಿಯಾಗಿ ಸ್ಥಾಪಿಸಲ್ಪಟ್ಟ ಮಂಗಳೂರು ವಿ.ವಿ. NAAS ರಾಂಕಿಂಗ್ ನಲ್ಲಿ ಎ ಗ್ರೇಡ್ ಪಡೆದಿತ್ತು. ಈಗ ಬಿ ಗ್ರೇಡಿಗೆ ಬಂದು ನಿಂತಿರುವುದು ವಿ.ವಿ.ಯ ವೈಫಲ್ಯವನ್ನು ಸೂಚಿಸುತ್ತಿದೆ. ಅಧ್ಯಾಪಕರಿಗೂ, ಉದ್ಯೋಗಿಗಳಿಗೂ ವೇತನ ಪಾವತಿಸಲೂ ಕೂಡಾ ಕಷ್ಟಪಡುವ ಮಟ್ಟಕ್ಕೆ ವಿ.ವಿ.ಯ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿದೆ. ವಿ.ವಿ. ಕಚೇರಿಯಲ್ಲಿ ಇತ್ತಿಚೆಗೆ ಜಾರಿ ನಿರ್ದೇಶನಾಲಯ ರೈಡ್ ಕೂಡ ನಡೆಸಿತ್ತು.
ಈ ಹಿಂದಿನ ಉಪಕುಲಪತಿಯವರಿಂದ ವಿ.ವಿ.ಯನ್ನು ಮತಾಂಧತೆಯ ಅಡ್ಡೆಯನ್ನಾಗಿಸುವ ಪ್ರಯತ್ನವಾಗಿರುವುದು ಪ್ರಜ್ಞಾವಂತರೆಲ್ಲರ ವಿರೋಧಕ್ಕೆ ಮತ್ತು ಕಳವಳಕ್ಕೂ ಕಾರಣವಾಗಿತ್ತು. ಈಗ ಉಪಕುಲಪತಿಗಳಾಗಿ ನಿಯುಕ್ತರಾಗಿರುವವರು ಹಲವಾರು ವರ್ಷಗಳಿಂದ ಮಂಗಳೂರು ವಿ.ವಿ.ಯ ವಿವಿಧ ಹುದ್ದೆಗಳನ್ನು ನಿರ್ವಹಿಸಿದವರು. ಅವರ ಮೇಲೆ ಹಲವಾರು ಆರೋಪಗಳೂ ಇವೆ. ಮೌಲ್ಯಮಾಪನ ರಿಜಿಸ್ಟ್ರಾರರಾಗಿ ನಡೆಸಿದ ಅವ್ಯವಹಾರದ ಕಾರಣಕ್ಕಾಗಿ ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಅಂತಹ ವ್ಯಕ್ತಿಯೊಬ್ಬರನ್ನು ಪ್ರತಿಷ್ಠಿತ ಮಂಗಳೂರು ವಿ.ವಿ.ಯ ಉಪಕುಲಪತಿಗಳಾಗಿ ನೇಮಿಸುವ ಮೂಲಕ ನಮ್ಮ ವಿ.ವಿ ಯನ್ನು ಅಧಃಪತನಕ್ಕೆ ತಳ್ಳುವ ಸಂಚಿನ ವಿರುದ್ಧ ಪ್ರಜ್ಞಾವಂತರೆಲ್ಲರೂ ಪ್ರತಿಭಟಿಸಬೇಕಾದ ಅನಿವಾರ್ಯತೆ ಇದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.
ಮಂಗಳೂರು ವಿ.ವಿ.ಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ , ಅವ್ಯವಹಾರದ ಬಗ್ಗೆ ಸೂಕ್ತ ತನಿಖೆಯಾಗಬೇಕು ಮತ್ತು ವಿ.ವಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಅದು ಆಗ್ರಹಿಸಿದೆ.
ರಾಜ್ಯದ ಹಿರಿಯ ವಿದ್ವಾಂಸರಾದ ಡಾ.ಮುಝಫರ್ ಅಸಾದಿಯವರ ಹೆಸರು ಮಂಗಳೂರು ವಿ.ವಿ ಉಪಕುಲಪತಿ ಸ್ಥಾನಕ್ಕೆ ಮಾತ್ರವಲ್ಲದೆ ಶಿವಮೊಗ್ಗ ಕುವೆಂಪು ವಿ.ವಿ.ಗೂ ಕೂಡ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅಲ್ಲಿ ಕೂಡ ಅವರಿಗೆ ನೇಮಕಾತಿ ನೀಡಲಿಲ್ಲ. ರಾಜ್ಯದ 40 ಕ್ಕೂ ಹೆಚ್ಚು ಸರಕಾರಿ ವಿ.ವಿ ಗಳ ಕುಲಪತಿಗಳಲ್ಲಿ ಒಬ್ಬರೂ ಕೂಡ ಅಲ್ಪಸಂಖ್ಯಾತ ಮುಸ್ಲಿಮರಿಲ್ಲದಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅನ್ಯಾಯ ಮತ್ತು ಅವಮಾನವಾಗಿರುತ್ತದೆ. ಪ್ರೊ.ಅಸಾದಿಯವರಂತಹ ಹಿರಿಯ ವಿದ್ವಾಂಸರನ್ನು ಕಡೆಗಣಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿ ಯವರಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದು ಈ ಬಗ್ಗೆ ಸಮುದಾಯವು ಜಾಗೃತರಾಗಿರಬೇಕು ಎಂದು ಬಾಫಕಿ ಫೌಂಡೇಶನ್ ಕರ್ನಾಟಕ ರಾಜ್ಯ ಅಧ್ಯಕ್ಷ ಹಾಜಿ ಡಾಕ್ಟರ್ ಶೇಕ್ ಬಾವ್ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಬಾಫಕಿ ತಂಙಳ್ ಫೌಂಡೇಷನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಸ್. ಇಬ್ರಾಹಿಂ ಕರೀಂ ಕಡಬ, ಕೋಶಾಧಿಕಾರಿ ರಿಯಾಝ್ ಹರೇಕಳ, ಸದಸ್ಯರಾದ ಸಿ.ಅಬ್ದುಲ್ ರಹ್ಮಾನ್ ಹಾಗೂ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಷಾದ್ ಮಲಾರ್ ಉಪಸ್ಥಿತರಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ