ಉಪ್ಪಿನಂಗಡಿ: ಸ್ಕೂಟರ್-ಟ್ಯಾಂಕರ್‌ ಅಪಘಾತ - ವಿದ್ಯಾರ್ಥಿ ಮರಣ

ಉಪ್ಪಿನಂಗಡಿ: ಸ್ಕೂಟರ್-ಟ್ಯಾಂಕರ್‌ ಅಪಘಾತ - ವಿದ್ಯಾರ್ಥಿ ಮರಣ

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ಬುಲೆಟ್ ಟ್ಯಾಂಕರ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟರ್‌ ಸಹ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ತಾಯಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಉಪ್ಪಿನಂಗಡಿ ಸೇಂಟ್‌ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಧ್ವಿತ್ (15) ಮೃತ ಬಾಲಕ. ಈತ ಕರಾಯ ಗ್ರಾಮದ ಕಲ್ಲೇರಿ ನಿವಾಸಿ ರಿಕ್ಷಾ ಚಾಲಕ ಜನಾರ್ದನ ಹಾಗೂ ಉಜ್ರುಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅನುರಾಧಾ ಅವರ ಪುತ್ರ.

      10ನೇ ತರಗತಿಯಲ್ಲಿ ಕಲಿಯುತ್ತಿರುವ ಅದ್ವಿತ್‌, ತರಗತಿ ಪರೀಕ್ಷೆಯ ಪುಸ್ತಕವನ್ನು ಶಾಲೆಗೆ ಕೊಡುವ ಸಲುವಾಗಿ ತಾಯಿ ಜತೆ ಸ್ಕೂಟರ್‌ನಲ್ಲಿ ಹೋಗಿದ್ದ. ಶಾಲೆಯಲ್ಲಿ ಪುಸ್ತಕ ಕೊಟ್ಟು ಹಿಂದಿರುಗಿ ಬರುವಾಗ ಈ ಅವಘಡ ಸಂಭವಿಸಿದೆ. ಅಪಘಾತ ಸಂಭವಿಸಿದ ತಕ್ಷಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ, ಸುಮಾರು 1 ತಾಸು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು

      ಗಾಂಧಿ ಪಾರ್ಕ್‌ನಿಂದ ಪೆಟ್ರೋಲ್ ಬಂಕ್ ತನಕವೂ ರಸ್ತೆ ಇಳಿಜಾರು ಇದ್ದು, ವಾಹನಗಳು ವೇಗವಾಗಿ ಬರುತ್ತಿರುತ್ತದೆ. ಅಪಘಾತ ನಡೆದ ಸ್ಥಳದಲ್ಲಿ ನಿರಂತರ ಅಪಘಾತ ನಡೆಯುತ್ತಿದ್ದು, ಈಗಾಗಲೇ ಐದಕ್ಕೂ ಅಧಿಕ ಸಾವು ಸಂಭವಿಸಿದೆ. ಇಲ್ಲಿ ಅಪಘಾತವನ್ನು ತಡೆಗಟ್ಟುವ ಸಲುವಾಗಿ 7 ವರ್ಷಗಳ ಹಿಂದೆ ಸ್ಥಳೀಯ ಸಂಘ ಸಂಸ್ಥೆ ಮತ್ತು ದಾಣಿಗಳ ಸಹಕಾರ ಪಡೆದುಕೊಂಡು ಬ್ಯಾರಿಕೇಡ್‌ ಹಾಕಲಾಗಿತ್ತು. ಆದರೆ, ಅದು ಕೆಲವು ಸಮಯ ಮಾತ್ರ ಇದ್ದು, ಬಳಿಕ ಮಾಯವಾಗಿರುತ್ತದೆ. ಆದ್ದರಿಂದ ಈ ಜಾಗದಲ್ಲಿ ರಸ್ತೆ ಉಬ್ಬು ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ