ಈ ಬಾರಿಯ ಬಕ್ರೀದ್ ಅವಧಿಯಲ್ಲಿ 6 ಸಾವಿರ ಹಸುಗಳ ರಕ್ಷಣೆ: ಸಚಿವ ಪ್ರಭು ಚವ್ಹಾಣ್

ಮೈಸೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯದಾದ್ಯಂತ ಈ ಬಾರಿ ಸುಮಾರು ಆರು ಸಾವಿರ ಹಸುಗಳ ರಕ್ಷಣೆ ಮಾಡಲಾಗಿದೆ ಎಂದು ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ತಿಳಿಸಿದರು.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಗೋಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಬಕ್ರೀದ್ ಅವಧಿಯಲ್ಲಿ ಗೋಹತ್ಯೆ ತಡೆಯುವಂತೆ ಎಲ್ಲ ಜಿಲ್ಲೆಗಳ ಎಸ್ಪಿಗಳಿಗೆ ಸೂಚನೆ ನೀಡಲಾಗಿತ್ತು. ಚೆಕ್ಪೋಸ್ಟ್ಗಳಲ್ಲಿ ಪೊಲೀಸರ ಜತೆ, ಇಲಾಖೆಯ ಪಶು ವೈದ್ಯರನ್ನೂ ನಿಯೋಜಿಸಿದ್ದೆವು. ಇದರಿಂದ ಸಾವಿರಾರು ಹಸುಗಳ ರಕ್ಷಣೆ ಆಗಿದೆ. ಗೋಮಾತೆ ಕಸಾಯಿಖಾನೆಗೆ ಸೇರಬಾರದು ಎಂಬುದೇ ನಮ್ಮ ಪ್ರಮುಖ ಉದ್ದೇಶ ಎಂದರು.
ಪ್ರಾಣಿ ಕಲ್ಯಾಣ ಸಹಾಯವಾಣಿಯನ್ನು ದೇಶದಲ್ಲೇ ಮೊದಲ ಬಾರಿ ಜಾರಿಗೆ ತರಲಾಗಿದೆ. ಈ ಸಹಾಯವಾಣಿಗೆ ಒಂದು ತಿಂಗಳಲ್ಲಿ 10 ಸಾವಿರ ಕರೆಗಳು ಬಂದಿದ್ದು, ಅವುಗಳಲ್ಲಿ ಶೇ 85 ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಎಂದು ಹೇಳಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ