ಈದ್ಗಾ ಮೈದಾನ: ಕಾಮಣ್ಣ-ರತಿ ಮೂರ್ತಿಗಳ ಪ್ರತಿಷ್ಠಾಪಿಸದಂತೆ ಕ್ರಮ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸಮಿತಿ ಮತ್ತು ಇತರ ಸಂಘ ಸಂಸ್ಥೆಗಳು ಕಾಮಣ್ಣ- ರತಿ ಮೂರ್ತಿ ಪ್ರತಿಷ್ಠಾಪಿಸದಂತೆ ಪೊಲೀಸರು ಗುರುವಾರ ಮೈದಾನದ ಪೂರ್ವ ಪ್ರವೇಶ ದ್ವಾರದ ಎದುರು ಅಡ್ಡಲಾಗಿ ಪೊಲೀಸ್ ವಾಹನ ನಿಲ್ಲಿಸಿದರು.
ಗಣೇಶ ಚೌತಿ, ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಅವಕಾಶ ನೀಡಿದಂತೆ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಹಬ್ಬಕ್ಕೂ ಅವಕಾಶ ನೀಡಬೇಕು ಎಂದು ನಗರದ ವಿವಿಧ ಸಂಘ–ಸಂಸ್ಥೆಗಳು ಪಾಲಿಕೆ ಅಧಿಕಾರಿಗಳಿಗೆ, ಮೇಯರ್‌ಗೆ ಮನವಿ ಸಲ್ಲಿಸಿದ್ದವು.
ಮೂರ್ತಿಗಳ ಪ್ರತಿಷ್ಠಾಪನೆಗೆ ಮೇಯರ್ ಅನುಮತಿ ನೀಡಿದ್ದರು. ಆದರೆ, ಪಾಲಿಕೆಯ ಆಯುಕ್ತರು ಅನುಮತಿ ನೀಡಿರಲಿಲ್ಲ. ಬುಧವಾರ ತಡರಾತ್ರಿವರೆಗೂ ಆಯುಕ್ತರು ಅನುಮತಿ ನೀಡದ ಕಾರಣ ಮಹಾಮಂಡಳದ ಸದಸ್ಯರು ಮೈದಾನದ ಎದುರು ಪ್ರತಿಭಟನೆ ನಡೆಸಿದ್ದರು.
'ಮೇಯರ್ ಅನುಮತಿ ನೀಡಿದರೂ ಆಯುಕ್ತರು ನೀಡುತ್ತಿಲ್ಲ. ಮೊಬೈಲ್ ಫೋನ್ ಬಂದ್ ಮಾಡಿರುವುದರಿಂದ, ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರ ಹಿಂದೆ ಯಾರದ್ದೋ ಷಡ್ಯಂತ್ರವಿದೆ. ಗುರುವಾರ ಬೆಳಿಗ್ಗೆ 11 ಗಂಟೆ ಒಳಗೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಮಹಾಮಂಡಳಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಮೈದಾನದ ಪ್ರವೇಶದ್ವಾರದ ಎದುರು ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಹಬ್ಬ ಆಚರಿಸುತ್ತೇವೆ’ ಎಂದು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸಮಿತಿ ಅಧ್ಯಕ್ಷ ಸಂಜಯ ಬಡಸ್ಕರ್ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ವಾಹನಗಳ ನಿಲುಗಡೆ ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮೈದಾನದ ಪೂರ್ವ ಮತ್ತು ಪಶ್ಚಿಮ ದ್ವಾರದ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ