ಆಸ್ಟ್ರೇಲಿಯಾ ಕೋಟೆ ಭೇಧಿಸಿದ ಭಾರತ: ಐತಿಹಾಸಿಕ ಜಯ

ಆಸ್ಟ್ರೇಲಿಯಾ ಕೋಟೆ ಭೇಧಿಸಿದ ಭಾರತ: ಐತಿಹಾಸಿಕ ಜಯ

ಬ್ರಿಸ್ಬೇನ್, ಜನವರಿ19:‌ ಆಸ್ಟೇಲಿಯಾದ ಅಜೇಯ ಕೋಟೆಯನ್ನು ಭೇಧಿಸಿದ ಭಾರತ ಸರಣಿಯನ್ನು 2-1ರಲ್ಲಿ ಗೆಲ್ಲುವ ಮೂಲಕ ಬಾರ್ಡರ್-ಗಾವಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಡ್ರಾ ಸಾಧಿಸಿದರೂ ಟ್ರೋಫಿಯನ್ನು ತನ್ನಲ್ಲೇ ಉಳಿಸಿ ಕೊಳ್ಳಬಹುದಾಗಿತ್ತಾದರೂ ಭಾರತವು ದಿಟ್ಟತನದ ಹೋರಾಟದ ಮೂಲಕ ಸರಣಿಯನ್ನು ಜಯಿಸಿ ಅಧಿಕಾರಯುತವಾಗಿ ಟ್ರೋಪಿಯನ್ನು ಉಳಿಸಿಕೊಂಡಿತು.

            ವಿಕೆಟ್‌ ಕೀಪರ್‌ ರಿಷಬ್‌ ಪಂಥ್‌ ರವರ ಸಮಯೋಚಿತ ದಿಟ್ಟತನದ ಆಟವು ಜಯವನ್ನು ಸುಲಭಗೊಳಿಸಿತು. ಅಜೇಯ 89 ರನ್ನುಗಳನ್ನು ಗಳಿಸಿದ ಪಂಥ್‌ ಪಂದ್ಯ ಶ್ರೇಷ್ಟ ಪ್ರಶಸಿ ಪಡೆದರು.  ಶುಭಮನ್‌ ಗಿಲ್‌ 91 ರನ್ನುಗಳ ಮೂಲಕ ಭದ್ರ ಬುನಾದಿಯನ್ನು ಹಾಕಿದ್ದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ ವಾಷಿಂಗ್ಟನ್‌ ಸುಂದರ್‌ ( 62) ಮತ್ತು ಶಾರ್ದೂಲ್‌ ಠಾಕೂರ್‌ (67) ಅರ್ಧ ಶತಕಗಳ ಮೂಲಕ ಉತ್ತಮ ಜೊತೆಯಾಟ ನೀಡಿದ್ದರು. ಎರಡನೇ ಇನ್ನಿಂಗ್ಸ್‌ ನಲ್ಲಿ ಮುಹಮ್ಮದ್‌ ಸಿರಾಜ್‌ 5 ಹಾಗೂ ಶಾರ್ದೂಲ್‌ ಠಾಕೂರ್‌ 4 ವಿಕೆಟ್‌ ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿದ್ದರು.

           ಪ್ರಥಮ ಟಸ್ಟ್‌ ನಲ್ಲಿ ಭಾರತವು 36 ರನ್ನುಗಳಿಗೆ ಆಲೌಟ್‌ ಆಗಿ ಟೀಕೆಗೊಳಗಾಗುವ ಮೂಲಕ ಕುಗ್ಗಿ ಹೋಗಿದ್ದರೂ ಮತ್ತೆ ಪುಟಿದೆದ್ದು ಸರಣಿಯನ್ನು ಕೈ ವಶ ಮಾಡಿಕೊಂಡಿರುವುದು ಭಾರತದ ಶಕ್ತಿ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ. ವಿರಾಟ್‌ ಕೊಹ್ಲಿಯ ಅಲಭ್ಯತೆ, ಪ್ರಮುಖ ಬೌಲರ್‌ ಗಳ ಅಭಾವದಲ್ಲೂ ಭಾರತ ದಿಟ್ಟ ಹೋರಾಟವನ್ನು ನಡೆಸಿದೆ.

          ಕೊನೆಯ ಹಾಗೂ ನಾಲ್ಕನೇ ಟೆಸ್ಟ್‌ ನ ಕೊನೆಯ ದಿನದಲ್ಲಿ ಭಾರತವು ಗೆಲ್ಲಲು 10 ವಿಕೆಟ್ ಗಳ ಸಹಾಯದಿಂದ 325 ರನ್ನುಗಳನ್ನು ಗಳಿಸಬೇಕಾಗಿತ್ತು. ಮಳೆರಾಯನ ಭೀತಿಯ ಮಧ್ಯೆಯೂ ಭಾರತ ತಂಡವು ತನ್ನ ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಿದೆ. ಗಾಬಾ ಕ್ರಈಡಾಂಗಣವು ಆಸ್ಟ್ರೇಲಿಯಾದ ಭದ್ರ ಕೋಟೆ. 1988-89 ರ ನಂತರ ಆಸ್ಟೇಲಿಯಾವು ಈ ಕ್ರೀಡಾಂಗಣದಲ್ಲಿ ಮೊದಲ ಸೋಲನ್ನು ಅನುಭವಿಸಿದೆ. ಗಾಬಾದಲ್ಲಿ 236 ರನ್ನುಗಳನ್ನು ಬೆನ್ನಟ್ಟಿ ಜಯ ಗಳಿಸಿರುವುದು ಈ ಹಿಂದಿನ ದಾಖಲೆಯಾಗಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ