ಅಪಹೃತ ಬಾಲಕ ಪತ್ತೆ: ಕೋಲಾರದಲ್ಲಿ ಸಿಕ್ಕಿಬಿದ್ದ ಖದೀಮರು ಅರೆಸ್ಟ್

ಅಪಹೃತ ಬಾಲಕ ಪತ್ತೆ: ಕೋಲಾರದಲ್ಲಿ ಸಿಕ್ಕಿಬಿದ್ದ ಖದೀಮರು ಅರೆಸ್ಟ್

ಮಂಗಳೂರು, ಡಿ.19: ಬಾಲಕನ ಅಪಹರಿಸಿ, ಬಿಟ್ ಕಾಯಿನ್ ರೂಪದಲ್ಲಿ ಹಣದ ಬೇಡಿಕೆ ಇಟ್ಟಿದ್ದ ಕಿಡ್ನಾಪರ್ಸ್ ಗಳನ್ನು ಪೊಲೀಸರು ಕೊನೆಗೂ ಬಂಧಿಸಲು ಯಶಸ್ವಿಯಾಗಿದ್ದಾರೆ. 

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಳ್ಳಿ ಗ್ರಾಮದ ಮನೆ ಒಂದರಲ್ಲಿ ಬಾಲಕನನ್ನು ಇರಿಸಲಾಗಿತ್ತು. ಮಂಜುನಾಥ್ ಎಂಬವರ ಮನೆಯಲ್ಲಿ ಇರಿಸಿದ್ದ ಬಾಲಕನನ್ನು ಮಾಸ್ತಿ ಠಾಣೆಯ ಪೊಲೀಸರು ರಕ್ಷಣೆ ಮಾಡಿದ್ದು ಪ್ರಕರಣ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಮಂಡ್ಯ ಮೂಲದ ಗಂಗಾಧರ್, ಬೆಂಗಳೂರಿನ ಕೋಮಲ್, ಕೂರ್ನಹೊಸಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಮಹೇಶ್ ಎಂಬವರನ್ನು ಬಂಧಿಸಲಾಗಿದೆ. 

ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ಯಾಂಕರ್ ಚಾಲಕನಾಗಿದ್ದ ಮಹೇಶ್ ಮತ್ತು ಕೋಮಲ್ ಗೆಳೆಯರಾಗಿದ್ದು ಮಂಡ್ಯದ ಗಂಗಾಧರ್ ಜೊತೆ ಸೇರಿ ಕಿಡ್ನಾಪ್ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ. ಗುರುವಾರ ಸಂಜೆಯಿಂದ ಕಾರಿನಲ್ಲಿ ತಿರುಗಾಡುತ್ತಿದ್ದ ತಂಡ, ಶುಕ್ರವಾರ ಸಂಜೆ ಕೋಲಾರಕ್ಕೆ ತಲುಪಿದೆ. ಮಹೇಶ್ ಅಲ್ಲಿಯದ್ದೇ ನಿವಾಸಿ ಆಗಿರುವುದರಿಂದ ಮಾಲೂರಿನ ಕೂರ್ನಹೊಸಹಳ್ಳಿ ಗ್ರಾಮಕ್ಕೆ ಬಂದು ಮಂಜುನಾಥ್ ಎಂಬವರ ಫೋನ್ ಬಳಸಿ ಕರೆ ಮಾಡಿದ್ದಾರೆ. ಬಳಿಕ ಮಂಜುನಾಥ್ ಮನೆಯಲ್ಲಿ ಬಾಲಕನನ್ನು ಇರಿಸಿದ್ದಾರೆ. ಮೊಬೈಲ್ ಟ್ರೇಸ್ ಮಾಡುತ್ತಿದ್ದ ಮಂಗಳೂರು ಪೊಲೀಸರು ಎಲರ್ಟ್ ಆಗಿದ್ದು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರೋರಾತ್ರಿ ಮಾಡಿದ ಕಾರ್ಯಾಚರಣೆಯಲ್ಲಿ ಅಪಹರಣಕಾರರಿಗೆ ಸಹಕರಿಸಿದ ಮಂಜುನಾಥ್ ಸೇರಿ ನಾಲ್ವರು ಸಿಕ್ಕಿಬಿದ್ದಿದ್ದಾರೆ. 

ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಉಜಿರೆಯ ರಥಬೀದಿ ಬಳಿಯ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಚಾರ್ಮಾಡಿ ಮೂಲಕ ಪರಾರಿಯಾಗಿದ್ದ ತಂಡ, ಹಾಸನದ ತಣ್ಣೀರುಹಳ್ಳದ ಮೂಲಕ ಬೆಂಗಳೂರು ಹೋಗಿದ್ದು ಗೊತ್ತಾಗಿತ್ತು. ಹೀಗಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದ ದ.ಕ. ಎಸ್ಪಿ ಲಕ್ಷ್ಮೀ ಪ್ರಸಾದ್, ಕಾರ್ಯಾಚರಣೆಗೆ ಇಳಿಸಿದ್ದರು. ಈ ನಡುವೆ, ಬಾಲಕನ ಮನೆಯವರಿಗೆ ಕರೆ ಮಾಡಿದ್ದ ತಂಡ ಮೊದಲು 17 ಕೋಟಿಗೆ ಡಿಮ್ಯಾಂಡ್ ಇಟ್ಟಿತ್ತು.

ಕೋವಿಡ್ ಸಂಕಷ್ಟದಿಂದ ಉಂಟಾಗಿರುವ ತೀವೃ ಆರ್ಥಿಕ ಬಿಕ್ಕಟಿನಿಂದಾಗಿ ಅಪರಾಧ ಸಂಖ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೋಲೀಸರು ಪದೇ ಪದೇ ಎಚ್ಚರಿಸುತ್ತಿದ್ದರೂ ಇಂತಹ ಘಟನೆಗಳು ನಡೆಯುತ್ತಿವೆ. ಸಾರ್ವಜನಿಕರು ಇನ್ನಷ್ಟೂ ಜಾಗೃತರಾಗಿ ಅಪರಾಧಗಳನ್ನು ಹಿಮ್ಮೆಟ್ಟಿಸಬೇಕಾಗಿದೆ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ