ಅಪ್ಘಾನಿಸ್ತಾನ: ಹಾರಿದ ವಿಮಾನದಿಂದ ಜಾರಿದವರ ಗುರುತು ಪತ್ತೆ-ಬಿಚ್ಚಿದ ತಲೆ, ಹೊರಬಂದ ಮಿದುಳು

ಅಪ್ಘಾನಿಸ್ತಾನ: ಹಾರಿದ ವಿಮಾನದಿಂದ ಜಾರಿದವರ ಗುರುತು ಪತ್ತೆ-ಬಿಚ್ಚಿದ ತಲೆ, ಹೊರಬಂದ ಮಿದುಳು

ಕಾಬೂಲ್‌: ಸೋಮವಾರ ತಾಲಿಬಾನಿಗಳು ಕಾಬೂಲ್‌ ನಗರವನ್ನು ಪ್ರವೇಶಿಸುತ್ತಿದ್ದಂತೆ, ದೇಶ ತೊರೆಯಲು ಸಾವಿರಾರು ಮಂದಿ ವಿಮಾನ ನಿಲ್ದಾಣಕ್ಕೆ  ಧಾವಿಸಿದ್ದರು. ಕಾಬೂಲ್‌ ವಿಮಾನ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿ ಒಂದು ರಣಾಂಗಣದಂತೆ ತೋರಿತ್ತು. ವಿಮಾನ ನಿಲ್ದಾಣದ ಕೆಲ ಆಘಾತಕಾರಿ ದೃಶ್ಯಗಳು ಜಗತ್ತಿನಾದ್ಯಂತ ವೈರಲ್‌ ಕೂಡಾ ಆಗಿದ್ದವು. ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಇಬ್ಬರು ವ್ಯಕ್ತಿಗಳು ಕೆಳಗೆ ಬೀಳುವ ದೃಶ್ಯವಂತೂ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.

      ಹಕ್ಕಿಗಳಂತೆ ಹಾರಿ ಕೆಳಗೆ ಬಿದ್ದ ವ್ಯಕ್ತಿಗಳ ಮೃತ ದೇಹಗಳ ಕುರಿತು ವಲಿ ಸಲೆಕ್‌ ಎಂಬುವವರು ಸುದ್ದಿತಾಣ 'ಸ್ಕ್ರಾಲ್‌.ಇನ್‌'ಗೆ ವಿವರಣೆ ನೀಡಿದ್ದಾರೆ. ಆ ಇಬ್ಬರು ವ್ಯಕ್ತಿಗಳೂ ಸಲೇಕ್‌ ಅವರ ನಿವಾಸದ ಛಾವಣಿಯ ಮೇಲೆ ಬಿದ್ದಿದ್ದರು. ಆ ಘಟನೆಯು ಹೃದಯ ವಿದ್ರಾವಕವಾಗಿತ್ತು ಎಂದು ಅವರು ಹೇಳುತ್ತಾರೆ. ಛಾವಣಿಯ ಮೇಲಿನ ಭಯಾನಕ ದೃಶ್ಯ ಸಲೆಕ್‌ ಅವರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಸಂಪೂರ್ಣ ಹಾನಿಗೊಂಡಿದ್ದ ಎರಡು ದೇಹಗಳಿಂದ ವಿಪರೀತ ರಕ್ತ ಹರಿದು ಹೊರಬರುತ್ತಿತ್ತು. ಅವರ ಹೊಟ್ಟೆ ಮತ್ತು ತಲೆಗಳು ತೆರೆದುಕೊಂಡಿದ್ದವು. ಮೆದುಳು ಹೊರಬಂದಿತ್ತು ಎಂದು ಸಲೆಕ್‌ ವಿವರಿಸಿದ್ದಾರೆ.

      ಅವರು ವಿಮಾನದಿಂದ ಎಸೆಯಲ್ಪಟ್ಟ ತಾಲಿಬಾನಿಗಳು ಎಂದು ನಾನು ಮೊದಲು ಭಾವಿಸಿದ್ದೆ. ಆದರೆ, ನೆರೆಹೊರೆಯವರು ಬಂದು ಮೃತದೇಹಗಳನ್ನು ಪರಿಶೀಲಿಸಿದ ನಂತರ ಅವರ ಹಿನ್ನೆಲೆ ತಿಳಿಯಿತು. ತಮ್ಮ ಪತ್ನಿ ಜಕಿಯಾ ಮನೆಯ ಛಾವಣಿಗೆ ಬಂದು ದೃಶ್ಯವನ್ನು ನೋಡಿದ ನಂತರ ಮೂರ್ಛೆ ಹೋದರೆಂದು ಸಲೆಕ್‌ ತಿಳಿಸಿದ್ದಾರೆ.

      ಕಾಬೂಲ್‌ನ ಖೈರ್‌ ಖಾನಾ ಪ್ರದೇಶದ ಎರಡು ಅಂತಸ್ತಿನ ಮನೆಯಲ್ಲಿ ಸೋಮವಾರ ಮಧ್ಯಾಹ್ನ ವಲಿ ಸಲೆಕ್‌ ವಿಶ್ರಾಂತಿ ಪಡೆಯುತ್ತಿದ್ದರು. ಆ ಸಮಯದಲ್ಲಿ ಮನೆಯ ಹೆಣ್ಣುಮಕ್ಕಳು ಅಡುಗೆ ಮಾಡುತ್ತಿದ್ದರು. ಇಬ್ಬರು ಗಂಡು ಮಕ್ಕಳು ನಿದ್ರಿಸುತ್ತಿದ್ದರು. ಇದ್ದಕ್ಕಿದ್ದಂತೆ, ಮೇಲಿನಿಂದ ಜೋರಾದ ಸದ್ದನ್ನು ಕೇಳಿದ ಸಲೆಕ್‌ ಕುಟುಂಬದ ಸದಸ್ಯರಿಗೆ ಗಾಬರಿಯಾಗಿತ್ತು. ಆ ಸದ್ದು ಬಾಂಬ್‌ ಸ್ಫೋಟದಂತೆ ಭಾಸವಾಯಿತು. ಸದ್ದನ್ನು ಕೇಳಿದ ನೆರೆಹೊರೆಯವರೂ ತಮ್ಮ ಮನೆಗಳಿಂದ ಹೊರಗೆ ಬಂದಿದ್ದರು. ಏನು ನಡೆಯಿತೆಂದು ತಿಳಿಯಲು ನಾನು ಛಾವಣಿ ಏರಿ ನೋಡಿದಾಗ ದಿಗ್ಭ್ರಾಂತನಾದೆ ಎಂದು ಸಲೆಕ್‌ ಹೇಳುತ್ತಾರೆ.

      ಇಬ್ಬರ ಶವಗಳನ್ನೂ 300 ಮೀಟರ್ ದೂರದಲ್ಲಿರುವ ಮಸೀದಿಗೆ ಕೊಂಡೊಯ್ಯಲಾಯಿತು. ಮಸೀದಿಯ ಮೌಲಾನಾ ಅವರ ಬಟ್ಟೆಗಳ ಜೇಬಿನಿಂದ ಗುರುತಿನ ಚೀಟಿಯನ್ನು ಪತ್ತೆ ಮಾಡಿದ ನಂತರ ಅವರ ಕುಟುಂಬಗಳನ್ನು ಸಂಪರ್ಕಿಸಲಾಯಿತು ಎಂದು ಸಲೆಕ್‌ ಅವರ ನೆರೆಮನೆಯ ಯುವಕ ವಾಜಿದ್ ಹೇಳಿದ್ದಾರೆ.

      ಮೃತಪಟ್ಟವರನ್ನು ಫಿದಾ ಮುಹಮ್ಮದ್ ಮತ್ತು ಶಫೀವುಲ್ಲಾ ಎಂದು ಗುರುತಿಸಲಾಗಿದೆ. ಇಬ್ಬರೂ 20 ರಿಂದ 25 ವರ್ಷದವರಾಗಿರಬಹುದು ಎಂದು ಸಲೆಕ್ ತಿಳಿಸಿದ್ದಾರೆ.

      47 ವರ್ಷದ ಸಲೆಕ್‌ ಅವರು ತಮ್ಮ ಮನೆಯಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ ಎಂದು ಸ್ಕ್ರಾಲ್‌.ಇನ್‌ ವರದಿ ಮಾಡಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ