ಅನುದಾನರಹಿತ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆ: ತರಗತಿಗಳು ಅಭಾಧಿತ

ಅನುದಾನರಹಿತ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆ: ತರಗತಿಗಳು ಅಭಾಧಿತ
republicday728
republicday468
republicday234

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನವರಿ 6 ಬುಧವಾರದಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ (ರುಪ್ಸಾ) ನಿರ್ಧರಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ರಾಜ್ಯದ ಎಲ್ಲಾ 30 ಜಿಲ್ಲೆಗಳಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿ 8 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದು ಬೆಳಿಗ್ಗೆ 10 ಗಂಟೆಗೆ ಮೌರ್ಯ ವೃತ್ತದಿಂದ ರ‍್ಯಾಲಿ ಹೊರಡಲಿದ್ದೇವೆ ಎಂದು ತಿಳಿಸಿದರು.

     ಪ್ರತಿಭಟನೆ ನಡೆಯುವ ದಿನ ಆಫ್‌ಲೈನ್ ಹಾಗೂ ಆನ್‌ಲೈನ್ ಕ್ಲಾಸ್‌ಗಳು ಎಂದಿನಂತೆ ನಡೆಯಲಿವೆ. ತರಗತಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರತೀ ಶಾಲೆಯಿಂದ ಒಬ್ಬರು‌ ಅಥವಾ ಇಬ್ಬರು ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಮೂರು ತಿಂಗಳಿಂದ ಸರ್ಕಾರಕ್ಕೆ ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಮನವಿ ಮಾಡುತ್ತಿದ್ದೇವೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. 15 ಬೇಡಿಕೆಗಳಲ್ಲಿ ಎರಡು ಬೇಡಿಕೆಗಳನ್ನು ಮಾತ್ರ ಸರ್ಕಾರ ಈವರೆಗೆ ಈಡೇರಿಸಿದೆ. ಉಳಿದ 13 ಬೇಡಿಕೆಗಳು ಹಾಗೆಯೇ ಬಾಕಿ ಉಳಿದಿವೆ ಎಂದು ಸರ್ಕಾರದ ನಡೆಗೆ ಅವರು ಬೇಸರ ವ್ಯಕ್ತಪಡಿಸಿದರು.

     ರುಪ್ಸಾ ಅಡಿಯಲ್ಲಿ ನೋಂದಣಿಗೊಂಡಿರುವ ಶಾಲೆಗಳ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 12,998 ಶಾಲೆಗಳು ಅಧಿಕೃತವಾಗಿ ರುಪ್ಸಾ ಶಾಲಾ ಒಕ್ಕೂಟದಲ್ಲಿ ನೋಂದಣಿ ಆಗಿದೆ. ಒಕ್ಕೂಟದ ವೆಬ್‌ಸೈಟ್‌ನಲ್ಲಿ ನೊಂದಾಯಿತ ಶಾಲೆಗಳ ಬಗ್ಗೆ ಮಾಹಿತಿ ಲಭ್ಯವಿದೆ ಎಂದರು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು. 'ಶಿಕ್ಷಣ ಮಂತ್ರಿಗಳೇ ತೊಲಗಿ' ಎಂದೂ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಅಥವಾ ಸರ್ಕಾರ ಅವರನ್ನು ಇಲಾಖೆಯಿಂದ ಬದಲಾಯಿಸಬೇಕು’ ಎಂದು ಆಗ್ರಹಿಸಿದರು. ಜನವರಿ 6 ರಂದು ನಡೆಯುವ ಪ್ರತಿಭಟನೆಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಶಿಕ್ಷಕರು ಮತ್ತು ಆಡಳಿತ ವರ್ಗ, ಅಲ್ಪಸಂಖ್ಯಾತರ ಅಸೋಸಿಯೇಷನ್, ಟೀಚರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮುಂತಾದ ಸಂಘಟನೆಗಳು ಬೆಂಬಲ ನೀಡಿವೆ. ಎಂದೂ ಹೇಳಿದರು.

ರುಪ್ಸಾದ ಬೇಡಿಕೆಗಳು:

ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ಕನಿಷ್ಠ ಒಂದು ಸಾವಿರ ಕೋಟಿಯ ಪ್ಯಾಕೇಜ್ ಘೋಷಿಸಬೇಕು.

ಸಂಬಳ ಇಲ್ಲದ ಶಿಕ್ಷಕರಿಗೆ ಪ್ರತಿ ತಿಂಗಳಲು ₹ 10 ಸಾವಿರ ನೀಡಬೇಕು.

1985ರಿಂದ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು.

2020ರ ನ. 11ರಂದು ಹೊರಡಿಸಿರುವ ಸುತ್ತೋಲೆ‌ಯನ್ನು ಸರ್ಕಾರ ಮರು ಪರಿಶೀಲಿಸಬೇಕು.

ಶಾಲೆಗಳ ಮಾನ್ಯತೆ ನವೀಕರಣವನ್ನು ಅದಾಲತ್ ರೂಪದಲ್ಲಿ ವಿಲೇವಾರಿ ಮಾಡಬೇಕು.

ಗಡಿಭಾಗದ ಶಾಲೆಗಳ ಮುಚ್ಚುವ ನಿರ್ಧಾರ ಹಿಂಪಡೆಯಬೇಕು.

2020-21 ನೇ ಸಾಲಿನ ಆರ್‌ಟಿಇ ಹಣ ಒಂದೇ ಕಂತಿನಲ್ಲಿ ಮರು ಪಾವತಿ ಮಾಡಬೇಕು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ