ಅಡಿಲೇಡ್ ಟೆಸ್ಟ್: ನಂಬಲಾಗದ ಬ್ಯಾಟಿಂಗ್ ಕುಸಿತ

ಅಡಿಲೇಡ್, ಡಿಸೆಂಬರ್ 19: ಆಸ್ಟೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ತನ್ನ ಕ್ರಿಕೆಟ್ ಚರಿತ್ರೆಯಲ್ಲೇ ಅತೀ ಸಣ‍್ಣ ಮೊತ್ತವನ್ನು ದಾಖಲಿಸಿ ಇತಿಹಾಸ ನಿರ್ಮಿಸಿತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 17ರಂದು ಆರಂಭವಾಗಿತ್ತು. ಹಗಲು-ರಾತ್ರಿ ಪಂದ್ಯವಾದ ಇದು ‘ಪಿಂಕ್ ಬಾಲ್ ಟೆಸ್ಟ್’ ಎಂದು ಕರೆಯಲ್ಪಡುತ್ತಿದ್ದ ಈ ಟೆಸ್ಟ್ ಪಂದ್ಯವು ಹಗಲು ರಾತ್ರಿಯಾಗಿ ನಡೆಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಸಾಧಾರಣ ಮೊತ್ತ ಗಳಿಸಿದ್ದರೂ ರವಿಚಂದ್ರನ್ ಅಶ್ವಿನ್ ರವರ ಉತ್ತಮ ಬೌಲಿಂಗ್ ನಿಂದಾಗಿ ಎದುರಾಳಿ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿ 53 ರನ್ ಗಳ ಮೊದಲ ಇನ್ನಿಂಗ್ಸ್ ಪಡೆದಿದ್ದ ಭಾರತವು ಉತ್ತಮ ಸ್ಥಿತಿಯಲ್ಲಿತ್ತು. ಮೂರನೇ ದಿನದಾಟದಲ್ಲಿ ಭಾರತ ತಂಡವು ನಂಬಲಸಾಧ್ಯವಾದ ರೀತಿಯಲ್ಲಿ ತರಗೆಳೆಗಳಂತೆ ಉದುರಿ ಹೋಯಿತು.
ಭಾರತದ ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲೇ ಕನಿಷ್ಠ ಮೊತ್ತವನ್ನು ದಾಖಲಿಸಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಹಲವಾರು ದಾಖಲೆಗಳ ಸರದಾರನಾದ ನಾಯಕ ವಿರಾಟ್ ಕೊಹ್ಲಿ ಕಳಪೆ ಸಾಧನೆಯ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡರು. ಎರಡನೇ ದಿನದ ಕೊನೆಯಲ್ಲಿ ಭಾರತವು ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 9 ರನ್ ಗಳಿಸಿತ್ತು. ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ಭಾರತದ ಘಟಾನುಘಟಿ ಬ್ಯಾಟ್ಸ್ ಮನ್ ಗಳು ಒಬ್ಬರ ಹಿಂದೆ ಒಬ್ಬರಂತೆ ಫೆವಿಲಿಯನ್ ಸೇರಿಕೊಂಡು ಕೇವಲ 36 ರನ್ ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಕ್ತಾಯ ಗೊಳಿಸಿತು. 36 ರನ್ ಗಳಿಗೆ ಒಂಭತ್ತು ವಿಕೆಟ್ ಕಳೆದುಕೊಂಡು ಆಟವಾಡುತ್ತಿದ್ದ ಭಾರತ ತನ್ನ ಸ್ಟಾರ್ ಬೌಲರ್ ಗಾಯಗೊಂಡು ನಿವೃತ್ತಿಯಾಗಿದ್ದರಿಂದ ಭಾರತದ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಪ್ಯಾಟ್ ಕಮಿನ್ಸ್ ರವರ ಶಾರ್ಟ್ ಬಾಲೊಂದು ಮುಹಮ್ಮದ್ ಶಮಿಯವರ ಮಣಿಕಟ್ಟಿಗೆ ಬಡಿದು ಗಾಯಗೊಂಡು ನಿವೃತ್ತಿಯಾದರು. ಇದರಿಂದ ಭಾರತವು 21.2 ಓವರ್ ಗಳಲ್ಲಿ 36ಕ್ಕೆ 9 ವಿಕೆಟ್ ಕಳೆದುಕೊಂಡು ತನ್ನ ಎರಡನೇ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
89 ರನ್ನುಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯ 21 ಓವರ್ ಗಳಲ್ಲಿ 2 ವಿಕೆಟುಗಳ ನಷ್ಟದಲ್ಲಿ 93 ರನ್ನುಗಳನ್ನು ಗಳಿಸಿ ಈ ಗುರಿಯನ್ನು ತಲುಪಿ ಮೊದಲ ಟೆಸ್ಟ್ ಪಂದ್ಯವನ್ನು ತನ್ನ ಕೈ ವಶ ಮಾಡಿಕೊಂಡಿತು.
ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಭಾರತದ ಈ ಹಿಂದಿನ ಕನಿಷ್ಟ ಮೊತ್ತ 42 ರನ್ನುಗಳು. ಅದು 1974ರಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ನಲ್ಲಿ ದಾಖಲಾಗಿತ್ತು. ವಿರಾಟ್ ಕೊಹ್ಲಿ ನಾಯಕತ್ವವು ಆ ದಾಖಲೆಯನ್ನು ಅಳಿಸಿ ಹಾಕಿತು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ