ಅಜ್ಞಾನಾಲಜಿ: ಅರಿವನ್ನು ಮರೆಮಾಚುವ ಮಾಯಾ ಪರದೆ
ಅಜ್ಞಾನಾಲಜಿ: ಅರಿವನ್ನು ಮರೆಮಾಚುವ ಮಾಯಾ ಪರದೆ

ಇತ್ತೀಚೆಗೆ ಒಬ್ಬ ಟ್ಯಾಕ್ಷಿ ಚಾಲಕ ತನ್ನ ಕಾರನ್ನು ಹೊರಡಿಸುತ್ತಲೇ ಕಲ್ಕಿ ಭಗವತೇ ನಮಃ ಎಂಬ ಮಂತ್ರದ ಕಾರ್ಡನ್ನು ಒಳಗೆ ಕೂತ ನನ್ನ ಕೈಗೆ ಕೊಟ್ಟ. ನನಗೆ ರೇಗಿತು. ಈತನ ಬಳಿಯಲ್ಲೇ ಅಲ್ವಾ ರೂಪಾಯಿ ೫೦೦ ಕೋಟಿ ಕಪ್ಪು ಹಣ ಸಿಕ್ಕಿದ್ದು ಎಂದು ಕೇಳಿದೆ. ಅದು ಆಶ್ರಮದ ಅಕೌಂಟ್ ವಿಭಾಗದವರು ಮಾಡಿದ ತಪ್ಪು ಸಾರ್ ಅಂದ. ಕಲ್ಕಿಯೇ ಎಲ್ಲಾ ದೇವರ ಮೂರ್ತ ರೂಪ ಎಂದೆಲ್ಲಾ ಆತ ಕೊಂಡಾಡುತ್ತಿದ್ದ. ನಮ್ಮಿಬ್ಬರ ಮಧ್ಯೆ ಜಟಾಪಟಿ ಶುರುವಾಯಿತು. ಹಾಗಿದ್ರೆ ಕೊರೋನಾ ವೈರಸ್ ಯಾಕೆ ಬಂತ್ರಿ? ಎಂದು ಕೇಳಿಬಿಟ್ಟೆ. ಆಗ ನನಗೆ ಅಚ್ಚರಿ ಕಾದಿತ್ತು. ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮೂರು ದಿನಗಳ ಹಿಂದಷ್ಟೇ ದಿಲ್ಲಿಯಲ್ಲಿ ಹೇಳಿದ ಉತ್ತರವೇ ಈತನ ಬಾಯಲ್ಲೂ ಬಂತು. ಮೂಕ ಪ್ರಾಣಿಗಳ ಸಂರಕ್ಷಣೆಗೆಂದೇ ದೇವರು ಅದನ್ನು ಸೃಷ್ಟಿಸಿದ್ದು. ಚೀನೀಯರು ಎಷ್ಟೊಂದು ವನ್ಯ ಜೀವಿಗಳನ್ನು ಕೊಂದು ತಿನ್ನುತ್ತಾರೆ. ಅವರಿಗೆ ಪಾಠ ಕಲಿಸಬೇಕಲ್ವಾ ಎಂದ.
ದೇವರ ಅಸ್ತಿತ್ವ ಕುರಿತ ಎಲ್ಲಾ ಪ್ರಶ್ನೆಗಳಿಗೂ ಆತ ಉತ್ತರಗಳನ್ನು ಕಂಠಪಾಟ ಮಾಡಿಕೊಂಡಂತಿತ್ತು. ತೆರಿಗೆ ವಂಚಿಸುವ ಶತ ಕೋಟ್ಯಾಧೀಶರತ್ತ, ನೆರೆ ಪರಿಹಾರಕ್ಕೆ ಕಾದಿರುವ ಕೋಟ್ಯಾಂತರ ಬಡವರತ್ತ ದೇವರು ಯಾಕೆ ಕಣ್ಣು ಬಿಡುವುದಿಲ್ಲ ಎಂದು ನಾನು ಕೇಳಿದಾಗ ಕೂಡಾ ಆತನಲ್ಲಿ ನುಣುಚು ಮಾತುಗಳಿದ್ದವು. ಶ್ಲೋಕಗಳನ್ನು ಪಟಪಟನೇ ಉದುರಿಸುತ್ತಿದ್ದ. ಎಲ್ಲಿಂದ ಬಂತು ಆತನಿಗೆ ಅಷ್ಟೆಲ್ಲಾ ಮಾಹಿತಿ? ಅದೇನೋ ಸತ್ಸಂಗದ ಚಾನೆಲ್ ಇದೆಯಂತೆ. ಅದನ್ನು ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಆಲಿಸಬಹುದಂತೆ, ಫಾರ್ವರ್ಡ್ ಮಾಡ್ಲಾ ಸಾರ್ ಎಂದು ಕೇಳಿದ. ಮೌಢ್ಯವನ್ನು ಅಥವಾ ಅಜ್ಞಾನವನ್ನು ವೈರಸ್‌ನಂತೆ ಪಸರಿಸುವ ಇಂತಹ ತಂತ್ರಗಳ ಅಧ್ಯಯನಕ್ಕೆ ಅಗ್ನಾಥಾಲಜಿ ಎನ್ನುತ್ತಾರೆ. ಬೇಕಿದ್ದರೆ ನೀವದಕ್ಕೆ ಅಜ್ಞಾನಾಲಜಿ ಎನ್ನಿ. ವಿಜ್ಞಾನದ ಬಹುತೇಕ ಎಲ್ಲಾ ಪದಗಳ ಹಾಗೆ ಇದೂ ಗ್ರೀಕ್ ಭಾಷೆಯ ಅಗ್ನೋಸಿಸ್ (ಅಗ್ನೋಸಿಸ್ ಅಂದರೆ ಅಜ್ಞಾನ, ಗೊತ್ತಿಲ್ಲದ್ದು) ಎಂಬ ಮೂಲದಿಂದಲೇ ಬಂದಿದೆ. ಜನರನ್ನು ಬೇಕಂತಲೇ ದಾರಿ ತಪ್ಪಿಸುವುದು, ಭಯ, ಸಂಶಯ ಹುಟ್ಟಿಸುವ ವಿಧಾನಗಳು ಈಗೀಗ ವಿರಾಟ್ ರೂಪ ಪಡೆಯುತ್ತಿದೆ. ಚಿಂತಕರು ಇದನ್ನೊಂದು ಅಕಾಡೆಮಿಕ್ ಅಧ್ಯಯನದ ವಿಷಯವಾಗಿ ಕೈಗೆತ್ತಿಕೊಳ್ಳಲು ಒಂದು ಹಿನ್ನೆಲೆ ಇದೆ:
೯೦ರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ತಂಬಾಕಿನ ನಿಷೇಧಕ್ಕೆ ಸಿದ್ಧತೆ ನಡೆಸಿದಾಗ ಸಿಗರೇಟ್ ಕಂಪೆನಿಗಳು ತತ್ತರಿಸಿದವು. ವಿಜ್ಞಾನಿಗಳ ಸಂಶೋಧನೆಗಳೂ ತಂಬಾಕಿನ ಅಪಾಯಗಳ ಬಗ್ಗೆ ಸಾಕ್ಷ್ಯಗಳನ್ನು ಮುಂದಿಡುತ್ತಿದ್ದವು. ಆಗ ಖ್ಯಾತ ಸಿಗರೇಟ್ ಕಂಪೆನಿಯ ರಹಸ್ಯ ದಾಖಲೆಯೊಂದು ಸೋರಿಕೆಯಾಯಿತು. ನಾವು ಸಿಗರೇಟನ್ನಷ್ಟೇ ಅಲ್ಲ, ಸಂಶಯಗಳನ್ನೂ ಉತ್ಪಾದಿಸಬೇಕು ಎಂಬ ಸುತ್ತೋಲೆಯನ್ನು ಕಂಪೆನಿ ತನ್ನ ಅಧಿಕಾರಿಗಳಿಗೆ ಕಳುಹಿಸಿತ್ತು. ವಿಜ್ಞಾನಿಗಳ ಪ್ರಯೋಗ ಸರಿ ಇಲ್ಲ. ಅದರಲ್ಲಿ ದೋಷಗಳಿವೆ ಎನ್ನಬಲ್ಲ ಕೆಲವು ವಿಜ್ಞಾನಿಗಳನ್ನೇ ಎತ್ತಿಕಟ್ಟಿ, ಸರಣಿ ಜಾಹೀರಾತು ಪ್ರಕಟಿಸಿ, ದುಬಾರಿ ವಕೀಲರ ಮೂಲಕ ಕೇಸು ದಾಖಲಿಸಿ, ಸಂಸತ್ತಿನಲ್ಲಿ ಕೂಡಾ ಗಲಾಟೆ ಎಬ್ಬಿಸಿದರು. ಒಟ್ಟಾರೆ ಗೊಂದಲ ಹುಟ್ಟಿಸುವ ಪಿತೂರಿ ನಡೆಯಿತು.
ವೈದ್ಯಕೀಯ ಜ್ಞಾನದ ಬೆಳಕಿಗೆ ತಡೆ ಒಡ್ಡುವ, ಸಂಶಯದ ಬೀಜ ಬಿತ್ತುವ, ಕಾನೂನಿನ ದಾರಿ ತಪ್ಪಿಸುವ ಈ ಪ್ರಕರಣದ ಕೂಲಂಕುಷ ಅಧ್ಯಯನ ನಡೆಸಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿ ಡೇವಿಡ್ ಡನ್ನಿಂಗ್ ಎಂಬಾತ ಮೊದಲ ಬಾರಿಗೆ ಅಜ್ಞಾನ ಪ್ರಸಾರದ ಹೊಸ ಪರಿಕಲ್ಪನೆಗಳನ್ನು ಬೆಳಕಿಗೆ ತಂದ. ಧರ್ಮ ಪ್ರಸಾರಕ್ಕೆ ಮಾತ್ರ ಸೀಮಿತವಾಗಿದ್ದ ಈ ತಂತ್ರ ಹೇಗೆ ಈಗಿನ ಡೇಟಾ ಯುಗದಲ್ಲಿ ಉದ್ಯಮ ವಲಯಕ್ಕೆ, ರಾಜಕೀಯಕ್ಕೆ ಸಾಂಸ್ಕೃತಿಕ ರಂಗಕ್ಕೆ ಲಗ್ಗೆ ಇಡುತ್ತಿದೆ ಎಂಬುದನ್ನು ವಿವರಿಸಿದ್ದ. ಅಜ್ಞಾನ ವಿತರಣಾ ತಂತ್ರಗಳ ಬಗ್ಗೆ ಈಗಂತೂ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ರಾಜ್ಯ ಶಾಸ್ತ್ರ ಪರಿಣತರು ಅಧ್ಯಯನ ನಡೆಸುತ್ತಿದ್ದಾರೆ. ಇದರ ಹಾವಳಿ ಚರ್ಚಿಸಲು ಜಾಗತಿಕ ಸಮ್ಮೇಳನವು ನಡೆದಿದೆ.
ಯಾವುದೇ ಸಮಾಜದಲ್ಲಿ ಅಜ್ಞಾನ ಹಾಸು ಹೊಕ್ಕಾಗಿರಲು ಅನೇಕ ಕಾರಣಗಳಿರುತ್ತವೆ. ಚಾರಿತ್ರಿಕ ಮರೆವು ಒಂದು ಕಾರಣ ಇರಬಹುದು. ತಂಜಾವೂರಿನ ಬೃಹದೇಶ್ವರ ದೇಗುಲದ ಶಿಖರಕ್ಕೆ ಅಂದಿನ ಜನರು ೧೮೦ ಟನ್ ತೂಕದ ಶಿಲೆಯನ್ನು ಹೇಗೆ ಏರಿಸಿದರು ಎಂಬುವುದು ಚರಿತ್ರೆಯಲ್ಲಿ ಮರೆತು ಹೋಗಿದೆ. ದೈವೀಶಕ್ತಿಯೇ, ಭಕ್ತಿಯೇ ಮಹಾಶಕ್ತಿ ಎಂಬ ಅಜ್ಞಾನ ಮಾತ್ರ ಉಳಿದು ಬಂದಿದೆ.
ಅಪಾಯದ ಅತೀ ಎಚ್ಚರಿಕೆಯು ಅಜ್ಙಾನ ಪ್ರಸಾರಕ್ಕೆ ಕಾರಣವಾಗಿದೆ. ಹಾವಿನ ನಾಗದೋಷದ ಭಯ, ವಾಸ್ತುದೋಷದ ಭಯ, ಪಾಪದ ಭಯ ಹುಟ್ಟಿಸಿ ಅದೆಷ್ಟು ಜನ ಉದ್ಧಾರವಾಗುತ್ತಿಲ್ಲ? ಇತ್ತೀಚಿನ ಕೊರೋನ ವೈರಸ್ಸನ್ನೇ ನೋಡಿ. (ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಇನ್ಫೋಡೆಮಿಕ್ ಅಂದರೆ ಸುದ್ಧಿ ಮಾರಿ ಎಂಬ ಪದವನ್ನೇ ಕೊಟ್ಟಿದೆ) ಭಯವನ್ನು, ಮುಖವಾಡಗಳನ್ನು, ಜ್ವರದ ಮಾತ್ರೆಗಳನ್ನು ಮಾರುವ ವಾಣಿಜ್ಯ ಶಕ್ತಿಗಳು ಅಪಾಯದ ಅತಿ ಪ್ರಚಾರಕ್ಕೆಂದೇ ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಭಯದ ಪ್ರಸಾರಕ್ಕೆಂದು ಅಜ್ಞಾನಿಗಳ ಸೈನ್ಯವನ್ನೇ ಸೃಷ್ಠಿಸುತ್ತವೆ. ಅತ್ತ ಗಡಿಯಲ್ಲಿನ ಸೈನಿಕರಿಗೆ ಸರಿಯಾದ ಬೂಟು-ಬಂದೂಕು ಇಲ್ಲದಿದ್ದರೂ ಪರವಾಗಿಲ್ಲ. ದೇಶಕ್ಕೆ ಅಪಾಯ ಬಂತೆಂದು ಹುಲ್ಲೆಬ್ಬಿಸಿ ಬಹುಕೋಟಿ ಫೈಟರ್ ಜೆಟ್‌ಗಳನ್ನು ಮಾರುವ ದಲ್ಲಾಳಿಗಳು ಮಜವಾಗಿರುತ್ತಾರೆ.
ಈ ವಿಶ್ವದ ಬಹಳಷ್ಟು ವಿದ್ಯಾಮಾನಗಳ ಬಗ್ಗೆ ನಮಗೆ ಅಜ್ಞಾನವಿದೆ. ಒಪ್ಪಿಕೊಳ್ಳೋಣ. ಜ್ಞಾನದ ಅಂಗಲ ದೊಡ್ಡದಾದಷ್ಟೂ ಅಜ್ಞಾನದ ಕ್ಷಿತಿಜ ವಿಸ್ತರಿಸುತ್ತಲೇ ಇರುತ್ತದೆ.
ಆದರೆ ತಮಾಷೆ ಎಂದರೆ, ಹಿಂದಿನ ಕಾಲದ ಜ್ಞಾನಿಗಳಿಗೆ ಎಲ್ಲವೂ ಗೊತ್ತಿತ್ತು! ಎಲ್ಲವನ್ನೂ ಆ ದೇವರೇ ಸೃಷ್ಠಿ ಮಾಡಿದ್ದು ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಎಳೆ ಮಗುವೊಂದು ಸಿಡುಬು (ಮೈಲಿ) ರೋಗದಿಂದ ನರಳಿ ಸತ್ತರೆ ಅದು ಪೂರ್ವಜನ್ಮದ ಪಾಪದ ಫಲ ಎಂದು ಹೇಳಿಬಿಡುತ್ತಿದ್ದರು. ಪ್ರಶ್ನಿಸುವ ಮನೋಭಾವನೆ ಇರುತ್ತಿರಲಿಲ್ಲ. ಈಗ ಜೀವಾಣುಗಳ ಬಗ್ಗೆ ಸಾಕಷ್ಟು ಗೊತ್ತಾಗಿದೆ. ಇನ್ನೂ ಗೊತ್ತಾಗಬೇಕಾದ್ದು ತುಂಬಾ ಇದೆ ಎಂಬುವುದು ಗೊತ್ತಾಗಿದೆ. ವಿಜ್ಞಾನದ ದೊಡ್ಡ ರಗಳೆ ಏನೆಂದರೆ, ಒಂದು ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ಹತ್ತಾರು ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತದೆ. ಧರ್ಮದ ಮಟ್ಟಿಗೆ ಈ ರಗಳೆಯೇ ಇಲ್ಲ. ದೇವರು ದೊಡ್ಡವನು! ಗೋಮಾತೆಯಲ್ಲೂ ಆತ ಅವಿತು ಕೂತು, ಅದರ ಉಸಿರಿನಲ್ಲಿ ಆಮ್ಲಜನಕವನ್ನೂ, ಚಿನ್ನದ ಬಣ್ಣದ ಮೂತ್ರದಲ್ಲಿ ಕ್ಯಾನ್ಸರ್ ನಿವಾರಕ ಔಷಧವನ್ನೂ ಹಂಚುವವನು.
ಹಿಂದೆಲ್ಲಾ ಅಜ್ಞಾನ ಅಥವಾ ಮೌಢ್ಯ ಅನ್ನುವುದು ಜ್ಞಾನದ ಕೊರತೆ ಎಂದಷ್ಟೇ ಆಗಿತ್ತು. ಈಗ ಅದು ಉದ್ಧೇಶಪೂರ್ವಕವಾಗಿ ಉತ್ಪಾದಿಸಬಹುದಾದ, ಸಮಾಜದ ಮೇಲೆ ಹಾಸಿ ಹೊದಿಸಬಹುದಾದ ಮಾಯಾ ಪರದೆ ಆಗುತ್ತಿದೆ ಎನ್ನುತ್ತಾರೆ ಸ್ಟಾನ್‌ಫರ್ಡ್ ವಿ.ವಿ.ಯ ವಿಜ್ಞಾನ ಚರಿತ್ರೆಗಾರ್ತಿ ಲಿಡಾ ಶ್ಕೀಬಿಂಗರ್. ರಾಜಕೀಯ ಚಾಣಕ್ಯರು ಮತ್ತು ಕಾರ್ಪೋರೇಟ್ ತಂತ್ರಿಗಳು ಅದನ್ನು ಹೇಗೆಲ್ಲಾ ಬಳಸತೊಡಗಿದ್ದಾರೆ ಎಂಬ ಬಗ್ಗೆ ಈಕೆ ಒಂದು ಗ್ರಂಥವನ್ನೇ ಬರೆದಿದ್ದಾರೆ.
ಹವಾಗುಣ ಬದಲಾಗುತ್ತಿದೆ ಎಂದು ವಿಜ್ಞಾನಿಗಳು ಅದೆಷ್ಟೋ ಸಾಕ್ಷ್ಯವನ್ನು ಒದಗಿಸಿದ್ದರೂ ಅವೆಲ್ಲವೂ ಸಂಶಯಾತೀತವಲ್ಲ, ಅದರಲ್ಲಿ ಪಟ್ಟಭದ್ರರ ವ್ಯೂಹವಿದೆ ಎಂದೆಲ್ಲಾ ಶಂಕಾಪ್ರಚಾರ ನಡೆಸಿ, ಸಮಾಜವನ್ನೇ ಇಬ್ಭಾಗಿಸಬಲ್ಲ ಜಾಣ ಹುನ್ನಾರಗಳನ್ನು ಎತ್ತಿ ತೋರಿಸಿದ್ದಾರೆ.
ಸಂಶಯದ ಹೊಗೆ ಎಬ್ಬಿಸಿ, ಮೌಢ್ಯದ ಪರದೆಯನ್ನು ಬೀಸುವಲ್ಲಿ ವಾಣಿಜ್ಯ ಶಕ್ತಿಗಳ ಜೊತೆ ಸಾಂಸ್ಕೃತಿಕ, ರಾಜಕೀಯ ತಂತ್ರಗಾರರು ಪೈಪೋಟಿಗೆ ನಿಂತಿದ್ದಾರೆ. ಒಬಾಮಾ ಅಮೇರಿಕದಲ್ಲಿ ಹುಟ್ಟಲೇ ಇಲ್ಲ ಎಂತಲೋ, ರಾಹುಲ್ ಗಾಂಧಿ ಇಟಲಿಯ ಪ್ರಜೆ ಎಂತಲೋ, ದೊರೆಸ್ವಾಮಿ ಫೇಕ್ ಎಂತಲೋ ಎಷ್ಟೊಂದು ಜನರನ್ನು ಆಗಲೇ ನಂಬಿಸಿಯಾಗಿದೆ. ನೆಹರು ಒಬ್ಬ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಮುತ್ಸದ್ಧಿ ಆಗಿದ್ದರು ಎಂಬುವುದನ್ನು ಈಗಿನ ವಾಟ್ಸಪ್ ವಿ.ವಿ.ಯ ಬಹುತೇಕ ಜನರು ನಂಬುತ್ತಿಲ್ಲ. ಗಾಂಧೀಜಿಯ ಗೊಂಬೆಗೆ ಪಿಸ್ತೂಲಿನಿಂದ ಗುಂಡಿಕ್ಕಿ ನಕಲಿ ನೆತ್ತರಿನ ಹೊಳೆ ಹರಿಸಿದಾಕೆಯೇ ಅಸಲೀ ಗಂಡು ಎನ್ನುವಂತಾಗಿದೆ.
ಸ್ಥಾಪಿತ ಮೌಲ್ಯಗಳನ್ನೆಲ್ಲಾ ಪಲ್ಟಿ ಹೊಡೆಸಿ, ಪುರಾತನ ಜ್ಞಾನವೇ ಶ್ರೇಷ್ಠ ಎಂಬುವುದನ್ನು ಬಿತ್ತಲಾಗುತ್ತಿದೆ. ಹಿಂದೊಂದು ಕಾಲದಲ್ಲಿ ನಮಗೆ ಎಲ್ಲವೂ ಗೊತ್ತಿತ್ತು. ರಾಕೆಟ್ ಇತ್ತು, ವಿಮಾನಗಳಿದ್ದವು, ಸುರೂಪಿ ಚಿಕಿತ್ಸೆ ಗೊತ್ತಿತ್ತು, ಬೆಳಕಿನ ವೇಗ ಗೊತ್ತಿತ್ತು, ಸಾಪೇಕ್ಷ ಸಿದ್ಧಾಂತ ಗೊತ್ತಿತ್ತು ಎಂಬಿತ್ಯಾದಿ ಬುರುಡೆಗಳನ್ನು ವಿಜ್ಞಾನ ಸಮ್ಮೇಳನದಲ್ಲಿ ಹರಿಯಬಿಡುವ ತಜ್ಞರು ಜಾಸ್ತಿ ಫಾರ್ವರ್ಡ್‌ಗಳನ್ನು ಗಿಟ್ಟಿಸುತ್ತಾರೆ. ಜ್ಞಾನ ವಿಸ್ತರಣೆಗಿಂತ ಅಜ್ಞಾನ ವಿತರಣೆಗೇ ಹೆಚ್ಚಿನ ಪ್ರಾಮುಖ್ಯ ಸಿಗತೊಡಗಿದೆ. ಹಳತಿಗೆ ಹೊಳಪು ಕೊಟ್ಟು ಮೆರವಣಿಗೆ ನಡೆಸುವವರೇ ಮೆರೆಯತೊಡಗಿದ್ದಾರೆ.
ಅರಿವನ್ನು ಮರೆಮಾಚುವುದೂ ಅಂಧಕಾರವನ್ನು ಪಸರಿಸುವ ಒಂದು ತಂತ್ರವೇ ಆಗಿರುತ್ತದೆ. ಆಧಾರ್‌ನಲ್ಲಿ ಶೇಖರವಾಗಿರುವ ಖಾಸಗಿ ವಿವರಗಳೆಲ್ಲಾ ಲಾಭಕೋರ ಕಂಪೆನಿಗಳ ತೆಕ್ಕೆಗೆ ಸೇರುತ್ತಿರುವ ಬಗ್ಗೆ ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದ ಟ್ರಿಬ್ಯೂನ್ ಸಂಪಾದಕ ಹರೀಶ್ ಖರೆ ತನ್ನ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಆದಿವಾಸಿ ಮಕ್ಕಳನ್ನು ಪಾಲಕರಿಂದ ಬೇರ್ಪಡಿಸಿ ಒಯ್ದು ಸಂಸ್ಕಾರ ಕೊಡಿಸುವ ಜಾಲದ ಬಗ್ಗೆ ಔಟ್‌ಲುಕ್ ಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದಾಗಲೇ ಅದರ ಸಂಪಾದಕ(ಕನ್ನಡಿಗ) ಕೃಷ್ಣಾಪ್ರಸಾದ್ ರಾಜೀನಾಮೆ ಕೊಡಬೇಕಾಯಿತು. ಹಾಗೆ ಕೆಲಸ ಬಿಟ್ಟು ಮನೆಗೆ ಹೋಗಬೇಕಾದ ಅಥವಾ ಮಸಿ ಬಳಸಿಕೊಳ್ಳಬೇಕಾದ ಖ್ಯಾತ ಪತ್ರಕರ್ತರ ಪಟ್ಟಿ ದಿನದಿನಕ್ಕೆ ಉದ್ದವಾಗುತ್ತಿದೆ. ಕರಣ್ ಥಾಪರ್, ಬಾಬ್ಬಿ ಘೋಷ್, ಪರಂಜಯ್ ಗುಹಾ ಠಾಕುರ್ತಾ, ಪ್ರಣೊಯ್ ರಾಯ್, ರವೀಶ್ ಕುಮಾರ್, ಆತಿಷ್ ತಸ್ವೀರ್ ಒಬ್ಬಿಬ್ಬರೇ?
ಮಾಯಾ ಪರದೆಯ ಎದುರಿನ ನಾಟಕವನ್ನು ಮಾತ್ರ ನೋಡುತ್ತೀರಿ, ನೇಪಥ್ಯದ ಕತ್ತಲತ್ತ ಇಣುಕಬೇಡಿ ಎಂಬ ಎಚ್ಚರಿಕೆ ಎಲ್ಲೆಡೆ ಸೂಸುತ್ತಿದೆ. ಪ್ರಭುತ್ವದ ಕುಣಿತಕ್ಕೆ ತಾಳ ಹಾಕುವ ಮಡಿಲು ಮಾಧ್ಯಮಗಳು ಮಾತ್ರ ವಿಜೃಂಭಿಸುತ್ತಿವೆ.
ಅಜ್ಞಾನ ವಿತರಣೆಯ ಜಾಗತಿಕ ಆಯಾಮ ಹೇಗೂ ಇರಲಿ. ಲಂಗು ಲಗಾಮಿಲ್ಲದ ಸಾಮಾಜಿಕ ಮಾಧ್ಯಮಗಳಿಂದಾಗಿ ತಾನೇ ತಜ್ಞ ಆಗಿ ಬಿಡುತ್ತಾನೆ/ಳೆ. ತೂಕ ತಗ್ಗಿಸುವ ವಿಧಾನಗಳ ಬಗ್ಗೆ ಯೂಟ್ಯೂಬ್ ವೀಡಿಯೋಗಲನ್ನು ನೋಡುತ್ತಾ ಯಾರು ಬೇಕಾದರೂ ಪೋಷಕಾಂಶಗಳ ಎಕ್ಸ್‌ಪರ್ಟ್ ಆಗಿಬಿಡಬಹುದು. ಅಂತಹವರು ಯಾವ ಅರ್ಹತೆ ಇಲ್ಲದಿದ್ದರೂ ತಮ್ಮದೇ ಯೂಟ್ಯೂಬ್ ಚಾನೆಲ್ಲನ್ನು ಆರಂಭಿಸಬಹುದು, ಆರಂಭಿಸುತ್ತಿದ್ದಾರೆ. ಆರೋಗ್ಯ ವಿಜ್ಞಾನದ ಬಗ್ಗೆ ಅ, ಆ, ಇ, ಈ ಗೊತ್ತಿಲ್ಲದವನು ಕೊರೋನ ವೈರಸ್‌ಗೆ ಗಿಡಮೂಲಿಕೆಗಳನ್ನು ಶಿಫಾರಸ್ಸು ಮಾಡುತ್ತಾನೆ. ಜಿಮ್‌ಗೆ ಹೋಗುವ ಟೆಕ್ಕಿಯೊಬ್ಬ ತನಗೆ ನೆಟ್‌ನಲ್ಲಿ ಸಿಗುವ ಅರೆಬರೆ ಮಹಿತಿಗಳನ್ನು ಸೇರಿಸಿ ತನ್ನದೇ ಫಾರ್ಮುಲಾವನ್ನು ಮಾರಾಟ ಮಾಡುವ ತಜ್ಞನಾಗುತ್ತಾನೆ. ಕಾಫಿಗೆ ಕಾಸಿಲ್ಲದವನೂ ಹಣ ಹೂಡಿಕೆಯ ಸಲಹೆಗಾರನಾಗಿ ಬಿಡುತ್ತಾನೆ. ಟ್ಯಾಕ್ಸಿ ಚಾಲಕನು ಆಧ್ಯಾತ್ಮದ ಪಾಠ ಹೇಳುವ ಪಂಡಿತನಾಗುತ್ತಾನೆ.
ಹೊಳಪಿನ ಹೊಸ ಯುಗವನ್ನು ತೋರಿಸುವ ಬದಲು ಈಗಿನ ಬಹುತೇಕ ಮಾಧ್ಯಮಗಳು ಕೊರಕಲು ಪ್ರಪಾತದ ಅಂಧಯುಗಕ್ಕೆ ನಮ್ಮನ್ನು ಕೊಂಡೊಯ್ಯುತ್ತಿವೆ.
ಕೃಪೆ: ಪ್ರಜಾವಾಣಿ ಭಾನುವಾರ ಪುರವಣಿ
ಲೇಖಕ: ನಾಗೇಶ ಹೆಗಡೆ
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ